(ಪ್ರಾತಿನಿಧಿಕ ಚಿತ್ರ)
ಚೆನ್ನೈ: ಸಲಿಂಗ ಜೋಡಿಯ ವಿವಾಹವನ್ನು ಸುಪ್ರೀಂ ಕೋರ್ಟ್ ಕಾನೂನುಬದ್ಧಗೊಳಿಸದಿದ್ದರೂ, ಅವರು ಕುಟುಂಬವೊಂದನ್ನು ಕಟ್ಟಿಕೊಳ್ಳಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಮಹಿಳೆಯೊಬ್ಬರಿಗೆ ಸಲಿಂಗ ಸಂಗಾತಿ ಜತೆ ಜೀವಿಸಲು ಅವಕಾಶ ಮಾಡಿಕೊಟ್ಟಿರುವ ಹೈಕೋರ್ಟ್, ಇಬ್ಬರು ಮಹಿಳೆಯರು ಕುಟುಂಬವನ್ನು ಕಟ್ಟಬಹುದು ಎಂದಿದೆ.
ಕುಟುಂಬದವರು ಬಲವಂತವಾಗಿ ತಮ್ಮ ಜತೆ ಇಟ್ಟುಕೊಂಡಿರುವ 25 ವರ್ಷದ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಅವರ ಸಲಿಂಗ ಸಂಗಾತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ.ಆರ್.ಸ್ವಾಮಿನಾಥನ್ ಮತ್ತು ವಿ.ಲಕ್ಷ್ಮೀನಾರಾಯಣ ಅವರನ್ನೊಳಗೊಂಡ ಪೀಠವು ನಡೆಸಿತು.
‘ಕುಟುಂಬ’ದ ವ್ಯಾಖ್ಯಾನವನ್ನು ವಿಸ್ತೃತವಾಗಿ ಅರ್ಥೈಸಬೇಕು ಎಂದು ಹೇಳಿದ ಪೀಠ, ಕುಟುಂಬದ ಬಂಧನದಲ್ಲಿರುವ ಅವರು (25 ವರ್ಷದ ಮಹಿಳೆ) ತಾನು ಸಲಿಂಗಿ ಮತ್ತು ಅರ್ಜಿದಾರರ ಜತೆ ಸಂಬಂಧದಲ್ಲಿ ಇದ್ದೇನೆ ಎಂದಿರುವುದಾಗಿ ತಿಳಿಸಿತು.
ತಾನು ಅರ್ಜಿದಾರರೊಂದಿಗೆ ಹೋಗಲು ಬಯಸುವುದಾಗಿ ಮಹಿಳೆಯು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. ಕುಟುಂಬದವರು ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಧನದಲ್ಲಿ ಇರಿಸಿದ್ದಾರೆ ಎಂಬ ಆರೋಪವನ್ನೂ ಅವರು ದೃಢಪಡಿಸಿದರು.
‘ಸುಪ್ರಿಯೊ ಅಲಿಯಾಸ್ ಸುಪ್ರಿಯಾ ಚಕ್ರವರ್ತಿ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಲಿಂಗ ಜೋಡಿಯ ವಿವಾಹವನ್ನು ಕಾನೂನುಬದ್ಧಗೊಳಿಸದೇ ಇದ್ದರೂ ಅವರು ಕುಟುಂಬವನ್ನು ಕಟ್ಟಿಕೊಳ್ಳಬಹುದು. ಮದುವೆಯು ಕುಟುಂಬವನ್ನು ಕಟ್ಟಿಕೊಳ್ಳುವ ಏಕೈಕ ವಿಧಾನವಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.
ಈ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪುರಸ್ಕರಿಸಿರುವುದಾಗಿ ಹೇಳಿದ ಪೀಠ, ಅರ್ಜಿದಾರರ ಜತೆ ಸೇರಿಕೊಳ್ಳಲು ಬಯಸುವ ಮಹಿಳೆಯನ್ನು ಅವರ ಕುಟುಂಬದವರು ಬಂಧನದಲ್ಲಿ ಇರಿಸಬಾರದು ಎಂದು ಆದೇಶಿಸಿತು. ಅಲ್ಲದೆ, ಸಲಿಂಗ ಜೋಡಿಗೆ ಅಗತ್ಯವಿದ್ದಾಗ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.