
ರಾಜೇಂದ್ರ ಸಿಂಗ್
ಗೋರಖಪುರ: ‘ಪರಿಸರ ಸಂರಕ್ಷಣೆಯ ಮೂಲಕ ಆರ್ಥಿಕ ಪ್ರಗತಿಯನ್ನು ಸಂಯೋಜಿಸುವ ‘ಸನಾತನ ಅಭಿವೃದ್ಧಿ ಮಾದರಿ’ಯು ಭಾರತವನ್ನು ವಿಶ್ವಗುರುವನ್ನಾಗಿಸಲು ಸಹಕಾರಿಯಾಗಲಿದೆ’ ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಜಲತಜ್ಞ ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಹಾಯೋಗಿ ಗೋರಖನಾಥ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಿದ್ದ ‘ಅಭಿವೃದ್ಧಿಯ ಜತೆಗೆ ಪರಿಸರ ಸವಾಲುಗಳು: ಸುಸ್ಥಿರ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ’ ಎಂಬ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
ಮನುಷ್ಯ ಮತ್ತು ಪರಿಸರ ನಡುವಿನ ಸೌಹಾರ್ದ ಸಂಬಂಧದಲ್ಲಿ ಪ್ರಾಚೀನ ಭಾರತದ ಜ್ಞಾನವನ್ನು ಒತ್ತಿ ಹೇಳಿದ್ದಾರೆ.
‘ಸನಾತನ ಎಂದರೆ ಶಾಶ್ವತ ಮತ್ತು ಸದಾ ಪರಿವರ್ತನೆಯಾಗುವಂತದ್ದು. ಪ್ರಾಚೀನ ಭಾರತದ ಅಭಿವೃದ್ಧಿಯ ಬೇರು ಇರುವುದೇ ಸುಸ್ಥಿರತೆಯಲ್ಲಿ. ಪ್ರಕೃತಿಯತ್ತ ಮನುಷ್ಯನ ಕರ್ತವ್ಯಗಳೇನು ಎಂಬುದನ್ನು ಶತಮಾನಗಳ ಹಿಂದೆಯೇ ವೇದ ಹಾಗೂ ಉಪನಿಷತ್ತುಗಳು ಹೇಳಿವೆ. ಇಂದಿನ ಪರಿಸರ ಸವಾಲುಗಳನ್ನು ಎದುರಿಸಲು ಮತ್ತೊಮ್ಮೆ ಆ ಸನಾತನ ಮಾದರಿಯತ್ತ ಭಾರತ ಹೊರಳಬೇಕಿದೆ’ ಎಂದಿದ್ದಾರೆ.
‘ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ನೀರಿನ ಸಮಸ್ಯೆಯು ಜಾಗತಿಕ ಮಟ್ಟದ್ದಾಗಿದ್ದು, ಇದಕ್ಕೆ ಸ್ಥಳೀಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಇದಕ್ಕೆ ಬೇಕಿರುವುದು ಜಲ ಸಾಕ್ಷರತೆ. ಜತೆಗೆ ನೀರಿನ ಬಿಡುಗಡೆ ಮತ್ತು ಮರುಪೂರಣಗೊಳಿಸುವುದರ ನಡುವಿನ ಸಮತೋಲನದ ನಿರ್ವಹಣೆ ಇಂದಿನ ಅಗತ್ಯವಾಗಿದೆ’ ಎಂದು ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.
‘ಯೋಜನೆ ಇಲ್ಲದ ಅಭಿವೃದ್ಧಿಯು ನದಿ ನೀರಿನ ಶುದ್ಧತೆ ಮತ್ತು ಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಭಾರತದ ನದಿಗಳಿಗೆ ಪಾಶ್ಚಾತ್ಯ ವಿನ್ಯಾಸ ಆಣೆಕಟ್ಟೆಗಳ ನಿರ್ಮಾಣದಿಂದ ಪರಿಸರ ವ್ಯವಸ್ಥೆಯೇ ಹಾಳಾಗುತ್ತಿದೆ. ಇದು 365 ಜಿಲ್ಲೆಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಇದಕ್ಕಾಗಿ ಸುಸ್ಥಿರ ಫಲಿತಾಂಶಗಳಿಗಾಗಿ ವಿಕೇಂದ್ರೀಕರಣಕ್ಕೆ ಒತ್ತು ನೀಡಬೇಕಿದೆ’ ಎಂದು ಪ್ರತಿಪಾದಿಸಿದ್ದಾರೆ.
‘ಉತ್ತರ ಪ್ರದೇಶವು ಪ್ರಕೃತಿಯ ಅತ್ಯಂತ ಪ್ರೀತಿಪಾತ್ರ ರಾಜ್ಯವಾಗಿದೆ. ಇಲ್ಲಿ ಮಳೆ ಆಧಾರಿತ ಬೆಳೆಗಳನ್ನು ಬೆಳೆಯುವ ಮಾದರಿಯನ್ನು ಅಳವಡಿಸಿ ಭವಿಷ್ಯದ ನೀರಿನ ಅಭಾವವನ್ನು ತಪ್ಪಿಸಬೇಕು’ ಎಂದು ರಾಜೇಂದ್ರ ಸಿಂಗ್ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.