
ಸಂಚಾರ ಸಾಥಿ
ನವದೆಹಲಿ: ದೇಶದಲ್ಲಿ ಮಾರಾಟವಾಗುವ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ ಸಾಥಿ’ ಸೈಬರ್ ಭದ್ರತಾ ‘ಆ್ಯಪ್’ನ ಪೂರ್ವ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ.
‘ಆ್ಯಪ್‌ನ ಕಡ್ಡಾಯ ಅಳವಡಿಕೆಯಿಂದ ನಾಗರಿಕರ ಖಾಸಗಿತನ, ವೈಯಕ್ತಿಕ ಹಕ್ಕುಗಳಿಗೆ ಚ್ಯುತಿ ಬರುತ್ತದೆ. ಸರ್ಕಾರ ಜನರ ಮೇಲೆ ಕಣ್ಗಾವಲು ಇಡುವುದು, ಗೂಢಚಾರಿಕೆ ನಡೆಸುವುದು ಸರಿಯಲ್ಲ. ಇದು ಸರ್ವಾಧಿಕಾರಿ ನಡೆ’ ಎಂದು ಆರೋಪಿಸುವ ಮೂಲಕ ವಿರೋಧ ಪಕ್ಷಗಳು ಕೇಂದ್ರದ ನಿರ್ಧಾರವನ್ನು ವ್ಯಾಪಕವಾಗಿ ಟೀಕಿಸಿದ್ದವು. ಸಂಸತ್ತಿನ ಹೊರಗೆ ಪ್ರತಿಭಟಿಸಿ, ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದವು.
ಲೋಕಸಭೆಯಲ್ಲಿ ಬುಧವಾರ ಕಲಾಪದ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ಬೆಳವಣಿಗೆಗಳ ಬೆನ್ನಲ್ಲೇ ಕೆಂದ್ರ ಸರ್ಕಾರ, ‘ಸಂಚಾರ ಸಾಥಿ’ ಆ್ಯಪ್‌ನ ಕಡ್ಡಾಯ ಅಳವಡಿಕೆ ಆದೇಶವನ್ನು ಹಿಂದಕ್ಕೆ ಪಡೆದಿರುವುದಾಗಿ ಬುಧವಾರ ಘೋಷಿಸಿದೆ.
‘ಗೂಢಚಾರಿಕೆ ಸಾಧ್ಯವಿಲ್ಲ’– ಸಿಂಧಿಯಾ:
ಇದಕ್ಕೂ ಮುನ್ನ, ವಿರೋಧ ಪಕ್ಷಗಳ ಆಕ್ಷೇಪಗಳ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಈ ಅಪ್ಲಿಕೇಷನ್ ಮೂಲಕ ಕಣ್ಗಾವಲು ಅಥವಾ ಬೇಹುಗಾರಿಕೆ ನಡೆಸಲು ಆಗುವುದಿಲ್ಲ. ಮೊಬೈಲ್‌ಗಳಲ್ಲಿ ಈ ಆ್ಯಪ್ ಅಳವಡಿಕೆ ಕುರಿತ ಆದೇಶದಲ್ಲಿ ಬದಲಾವಣೆಗಳನ್ನು ಮಾಡಲು ಸಚಿವಾಲಯ ಸಿದ್ಧವಿದೆ’ ಎಂದು ಹೇಳಿದರು.
‘ಬಳಕೆದಾರರು ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳದಿದ್ದರೆ ಅದು ಕಾರ್ಯ ನಿರ್ವಹಿಸುವುದಿಲ್ಲ. ಅಲ್ಲದೆ ಅವರು ಆ್ಯಪ್ ಅನ್ನು ಅಳಿಸಬಹುದು’ ಎಂದು ಅವರು ಪುನರುಚ್ಚರಿಸಿದರು.
ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ:
ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಅವರು ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆಯಿಂದ ನಾಗರಿಕರ ಮೇಲೆ ಗೂಢಚಾರಿಕೆ ಮಾಡಿದಂತೆ ಆಗುತ್ತದೆ. ಇದು ಸರಿಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
‘ಆ್ಯಪ್ ನಿಷ್ಕ್ರಿಯಗೊಳಿಸಿದ ಬಳಿಕವೂ, ಅದರ ಎಲ್ಲ ವೈಶಿಷ್ಟ್ಯಗಳು ನಿಷ್ಕ್ರಿಯವಾಗಿವೆಯೋ, ಇಲ್ಲವೋ ಎಂಬುದು ಬಳಕೆದಾರರಿಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಇದು ಖಾಸಗಿತನದ ಹಕ್ಕಿನ ಉಲ್ಲಂಘನೆಯಗುತ್ತದೆ. ಅಲ್ಲದೆ ಬೇಹುಗಾರಿಕೆಯ ಶಂಕೆ ಮೂಡುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ‘ಈ ಆ್ಯಪ್ ಅನ್ನು ಸರ್ಕಾರ ಭಿನ್ನಮತೀಯರ ವಿರುದ್ಧ ಬಳಸಬಹುದು. ಇದರಿಂದ ಪತ್ರಕರ್ತರು, ವಿರೋಧ ಪಕ್ಷದ ನಾಯಕರ ವಿರುದ್ಧ ಬೇಹುಗಾರಿಕೆ ನಡೆಸಬಹುದು’ ಎಂದು ಆರೋಪಿಸಿದರು.
‘ಅಲ್ಲದೆ ಜನರ ಬ್ಯಾಂಕ್ ಖಾತೆ ಸಂಖ್ಯೆಗಳು, ಪಾಸ್‌ವರ್ಡ್‌ಗಳು, ವೈಯಕ್ತಿಕ ದತ್ತಾಂಶ ಸೇರಿದಂತೆ ಸೂಕ್ಷ್ಮ ಮಾಹಿತಿ ಬಹಿರಂಗ ಆಗಬಹುದಾದ ಅಪಾಯವೂ ಇದೆ’ ಎಂದು ಅವರು ಎಚ್ಚರಿಸಿದರು.
ಆದೇಶದಲ್ಲಿ ಏನಿತ್ತು?:
ಭಾರತದಲ್ಲಿ ಮಾರಾಟವಾಗುವ ಎಲ್ಲ ಮೊಬೈಲ್‌ಗಳಲ್ಲಿ ಮತ್ತು ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ಗಳಲ್ಲಿ ಸಾಫ್ಟ್‌ವೇರ್ ನವೀಕರಣದ ಮೂಲಕ ‘ಸಂಚಾರ ಸಾಥಿ’ ಆ್ಯಪ್ ಅನ್ನು ಕಡ್ಡಾಯವಾಗಿ ಅಳವಡಿಸುವಂತೆ ಎಲ್ಲ ಮೊಬೈಲ್ ಫೋನ್ ತಯಾರಕ ಕಂಪನಿಗಳಿಗೆ ಕೇಂದ್ರ ಸರ್ಕಾರ ನವೆಂಬರ್ 28ರಂದು ಆದೇಶಿಸಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.
ಈ ಆದೇಶದ ವಿರುದ್ಧ ‘ಆ್ಯಪಲ್’, ‘ಸ್ಯಾಮ್ಸಂಗ್’ ನಂತಹ ಮೊಬೈಲ್ ತಯಾರಿಕಾ ಕಂಪನಿಗಳೂ ಧ್ವನಿಯೆತ್ತಿದ್ದವು. ಈ ಕುರಿತು ಸರ್ಕಾರದ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದವು.
10 ಪಟ್ಟು ಹೆಚ್ಚಿದ ಆ್ಯಪ್ ಅಳವಡಿಕೆ: ಇಲಾಖೆ
ನವದೆಹಲಿ: ‘ಸಂಚಾರ ಸಾಥಿ’ ಆ್ಯಪ್ ಕಡ್ಡಾಯ ಅಳವಡಿಕೆ ಆದೇಶ ಹೊರಬಿದ್ದ ಬೆನ್ನಲ್ಲೇ ಮೊಬೈಲ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಕೇವಲ ಒಂದು ದಿನದಲ್ಲಿ 6 ಲಕ್ಷಕ್ಕೂ ಹೆಚ್ಚು ಮೊಬೈಲ್ ಬಳಕೆದಾರರು ಸ್ವಯಂ ಪ್ರೇರಿತವಾಗಿ ಈ ಆ್ಯಪ್ ಅಳವಡಿಸಿಕೊಂಡಿದ್ದಾರೆ. ಅಂದರೆ ಅಳವಡಿಕೆ ಪ್ರಕ್ರಿಯೆ 10 ಪಟ್ಟು ಏರಿಕೆಯಾಗಿದೆ. ಇದರಿಂದ ಒಟ್ಟಾರೆ ಈ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆ 1.5 ಕೋಟಿ ಆಗಿದೆ ಎಂದು ಅದು ಮಾಹಿತಿ ನೀಡಿದೆ. ‘ಜನರು ತಾವಾಗಿಯೇ ಈ ಆ್ಯಪ್ ಅಳವಡಿಸಿಕೊಳ್ಳಲು ಉತ್ಸುಕತೆ ತೋರುತ್ತಿದ್ದಾರೆ. ಹೀಗಾಗಿ ಮೊಬೈಲ್‌ಗಳಲ್ಲಿ ಅದರ ಪೂರ್ವ ಅಳವಡಿಕೆಯನ್ನು ಕಡ್ಡಾಯಗೊಳಿಸದಿರಲು ನಿರ್ಧರಿಸಲಾಗಿದೆ’ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ. ‘ಆ್ಯಪ್ ಕುರಿತು ಕಡಿಮೆ ಜ್ಞಾನವುಳ್ಳವರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಲು ಇಲಾಖೆ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಆ್ಯಪ್ ಅಳವಡಿಕೆ ಸುಲಭವಾಗುವಂತೆ ಮಾಡಲಾಗುವುದು’ ಎಂದು ಅದು ಹೇಳಿದೆ.
ಜನರ ದಾರಿತಪ್ಪಿಸಲು ಸ್ಪಷ್ಟನೆ: ಖೇರಾ ಆರೋಪ
‘ಕೇಂದ್ರ ಸರ್ಕಾರವು ಸಂಚಾರ ಸಾಥಿ ಆ್ಯಪ್ ಮೂಲಕ ನಾಗರಿಕರ ಮೇಲೆ ಕಣ್ಗಾವಲಿಡಲು ಮುಂದಾಗಿರುವುದು ಲಜ್ಜೆಗೇಡಿ ನಡೆ. ಈ ವಿಷಯದಲ್ಲಿ ಸರ್ಕಾರ ಸಿಕ್ಕಿಬಿದ್ದಾಗ ಜನರ ದಾರಿತಪ್ಪಿಸಲು ಸ್ಪಷ್ಟೀಕರಣ ನೀಡುತ್ತಿದೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಆರೋಪಿಸಿದರು. ಬಿಜೆಪಿಯ ನಿಘಂಟಿನಲ್ಲಿ ಐಟಿ ಎಂದರೆ ‘ಮಾಹಿತಿ ತಂತ್ರಜ್ಞಾನ’ ಅಲ್ಲ ಅದು ‘ಗುರುತಿನ ಕಳ್ಳತನ’ (ಐಡೆಂಟಿಟಿ ಥೆಫ್ಟ್) ಎಂಬಂತಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು. ‘ಈ ಆ್ಯಪ್ ಮೂಲಕ ಬಿಜೆಪಿಯು ಜನರ ಮಲಗುವ ಕೋಣೆಯನ್ನೂ ಪ್ರವೇಶಿಸಲಿದೆ. ಡಿಜಿಟಲ್ ಬೇಹುಗಾರಿಕೆ ಮೂಲಕ ಜನರನ್ನು ಬೆದರಿಸಲು ನಿಯಂತ್ರಿಸಲು ಪ್ರಯತ್ನಿಸುತ್ತದೆ. ನಾಗರಿಕರ ಹಕ್ಕುಗಳನ್ನು ದಮನ ಮಾಡಿ ದಬ್ಬಾಳಿಕೆಯ ವಾತಾವರಣ ಸೃಷ್ಟಿಸುತ್ತದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.