ADVERTISEMENT

ಫಡ್ನವೀಸ್‌–ರಾವುತ್‌ ಭೇಟಿ, ಎರಡು ಗಂಟೆ ಚರ್ಚೆ: ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 1:51 IST
Last Updated 27 ಸೆಪ್ಟೆಂಬರ್ 2020, 1:51 IST
ದೇವೇಂದ್ರ ಫಡ್ನವೀಸ್‌ ಮತ್ತು ಸಂಜಯ್‌ ರಾವುತ್‌
ದೇವೇಂದ್ರ ಫಡ್ನವೀಸ್‌ ಮತ್ತು ಸಂಜಯ್‌ ರಾವುತ್‌   

ಮುಂಬೈ: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮತ್ತು ಆಡಳಿತಾರೂಢ ಶಿವಸೇನೆಯ ಮುಖ್ಯ ವಕ್ತಾರ ಸಂಜಯ್‌ ರಾವುತ್‌ ಅವರು ಮುಂಬೈನ ಪಂಚತಾರ ಹೋಟೆಲ್‌ವೊಂದರಲ್ಲಿ ಶನಿವಾರ ರಾತ್ರಿ ಭೇಟಿಯಾಗಿದ್ದು, ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ಈ ಬೆಳವಣಿಗೆಯು ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಆದರೆ, ಈ ಭೇಟಿಯ ಹಿಂದೆ ರಾಜಕಾರಣವಿರಲಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ.

ಶಿವಸೇನೆಯ ಸಂಸದ ಸಂಜಯ್‌ ರಾವುತ್‌ ಅವರು, ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕರೂ ಆಗಿದ್ದು, ದೇವೇಂದ್ರದ ಫಡ್ನವೀಸ್‌ ಅವರೊಂದಿಗೆ ನಿಗದಿಯಾಗಿರುವ ಸಂದರ್ಶನದ ಕುರಿತು ಚರ್ಚಿಸಲು ಭೇಟಿ ನಡೆದಿದೆ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಅದೂ ಅಲ್ಲದೆ, ಸಂಜಯ್‌ ರಾವುತ್‌ ಅವರು ರಾಜಕಾರಣವನ್ನೂ ಮೀರಿ ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ADVERTISEMENT

ಇಬ್ಬರೂ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳನ್ನು ಸೃಷ್ಟಿ ಮಾಡುತ್ತಿರುವಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ, ಬಿಜೆಪಿಯ ಪ್ರವೀಣ್‌ ದಾರೆಕರ್‌, ‘ಸಾಮ್ನ’ದೊಂದಿಗಿನ ನಿಗದಿತ ಸಂದರ್ಶನದ ಕುರಿತು ಚರ್ಚೆ ನಡೆಸಲು ಇಬ್ಬರೂ ಭೇಟಿಯಾಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

‘ಸಂಜಯ್ ರಾವುತ್‌ ಅವರು ಫಡ್ನವೀಸ್ ಅವರ ಸಂದರ್ಶನ ನಡೆಸುವ ಆಶಯ ವ್ಯಕ್ತಪಡಿಸಿದ್ದರು. ಆ ಬಗ್ಗೆ ಚರ್ಚೆ ನಡೆಸಲು ಸಭೆ ಸೇರಬೇಕಾಗಿತ್ತು. ಪೂರ್ಣ ಪ್ರಮಾಣದ ಸಂದರ್ಶನಯನ್ನು ಪ್ರಕಟಿಸಬೇಕು ಎಂದು ದೇವೇಂದ್ರ ಫಡ್ನವೀಸ್ ರಾವುತ್‌ ಅವರಿಗೆ ತಿಳಿಸಿದ್ದಾರೆ’ ಎಂದು ದಾರೆಕರ್ ಹೇಳಿದರು. ಬಿಹಾರ ಚುನಾವಣೆ ಮುಗಿದ ನಂತರ ಸಂದರ್ಶನ ನಡೆಯಲಿದೆ ಎಂದು ದಾರೆಕರ್‌ ಹೇಳಿದ್ದಾರೆ.

ಇಬ್ಬರೂ ನಾಯಕರ ಸಭೆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಅಲ್ಲದೆ, ಈ ರೀತಿಯ ಭೇಟಿ ಅಸಹಜವೇನಲ್ಲ ಎಂದೂ ಅವರು ತಿಳಿಸಿದ್ದಾರೆ.

ಈ ಹಿಂದೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸಂದರ್ಶನ ಮಾಡಿದ್ದ ‘ಸಾಮ್ನ’ ಅದನ್ನು ಮೂರು ಭಾಗಗಳಾಗಿ ಪ್ರಕಟಿಸಿತ್ತು.

ರಾವುತ್‌ ಮತ್ತು ಪವಾರ್ ಅವರನ್ನು ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ರಚನಾಕಾರರೆಂದು ಮಹಾರಾಷ್ಟ್ರ ರಾಜಕೀಯದಲ್ಲಿ ಪರಿಗಣಿಸಲಾಗಿದೆ.

ಬಿಜೆಪಿಯೊಂದಿಗಿನ ಹಳೇ ಸಂಬಂಧ ಮುರಿದುಕೊಂಡಿರುವ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಸರ್ಕಾರ ರಚಿಸಿದೆ. ಅಂದಿನಿಂದ, ಠಾಕ್ರೆ ಮತ್ತು ಫಡ್ನವಿಸ್ ನಡುವಿನ ಸಂಬಂಧ ಹಳಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.