ADVERTISEMENT

ಕಾಶ್ಮೀರ ಕುರಿತು ಮುಫ್ತಿ ಹೇಳಿಕೆ: ಬಿಜೆಪಿ ಪಾಪದ ಫಲ ಎಂದು ಟೀಕಿಸಿದ ಸಂಜಯ್ ರಾವುತ್

ಪಿಟಿಐ
Published 27 ಮಾರ್ಚ್ 2022, 10:25 IST
Last Updated 27 ಮಾರ್ಚ್ 2022, 10:25 IST
ಶಿವಸೇನೆ ಸಂಸದ ಸಂಜಯ್ ರಾವುತ್
ಶಿವಸೇನೆ ಸಂಸದ ಸಂಜಯ್ ರಾವುತ್   

ಮುಂಬೈ: ಪಾಕಿಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಕೇಂದ್ರ ಮಾತುಕತೆ ನಡೆಸುವವರೆಗೂ ಕಾಶ್ಮೀರದಲ್ಲಿ ಶಾಂತಿಯು ಅಸಾಧ್ಯವಾಗಿರುತ್ತದೆ ಎಂದು ಮೆಹಬೂಬಾ ಮುಫ್ತಿ ಹೇಳಿಕೆ ವಿಚಾರವಾಗಿ ಶಿವಸೇನೆ ಸಂಸದ ಸಂಜಯ್ ರಾವುತ್, ಪಿಡಿಪಿ ಜೊತೆ ಸೇರಿ ಅಧಿಕಾರ ಹಂಚಿಕೊಳ್ಳುವ ಮೂಲಕ ಬಿಜೆಪಿ ಅಂತಹವರಿಗೆ ಶಕ್ತಿ ನೀಡಿತು. ಹಾಗಾಗಿ ಈಗ ಮುಫ್ತಿ ಏನು ಹೇಳುತ್ತಿದ್ದಾರೋ ಅದಕ್ಕೆ ಬಿಜೆಪಿಯೇ ಹೊಣೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕೆಲವು ಸಮಯದಲ್ಲಿ ಬಿಜೆಪಿಯ 'ಸ್ನೇಹಿತ' ಆಗಿತ್ತು. ಪಿಡಿಪಿ ಮೊದಲಿನಿಂದಲೂ 'ಪಾಕಿಸ್ತಾನದ ಪರವಾಗಿದೆ ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ' ಎಂದು ಅವರು ಹೇಳಿದ್ದಾರೆ.

2015 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಆದರೆ, 2018ರ ಜೂನ್‌ನಲ್ಲಿ ಮೈತ್ರಿ ಮುರಿದುಹೋಯಿತು.

ADVERTISEMENT

ಪಾಕಿಸ್ತಾನ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮಾತನಾಡಬೇಕೆಂದು ಶನಿವಾರ ಮುಫ್ತಿ ಪುನರುಚ್ಚರಿಸಿದ್ದರು.

ಸಂಸತ್ ದಾಳಿಯ ಅಪರಾಧಿ ಅಫ್ಜಲ್‌ ಗುರುವನ್ನು ಮುಫ್ತಿ ಬೆಂಬಲಿಸಿದ್ದರು, ಈಗಲೂ ಬೆಂಬಲಿಸುತ್ತಿದ್ದಾರೆ. ಹೀಗಿದ್ದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಈಗ, ಅದೇ ಮೆಹಬೂಬಾ ಮುಫ್ತಿ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ಬಯಸಿದ್ದಾರೆ. ಇದು ಬಿಜೆಪಿಯ ಪಾಪದ ಫಲ' ಎಂದು ರಾವುತ್ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಬಿಜೆಪಿಯ ನಿಲುವು ಏನೇ ಇದ್ದರೂ ಕೂಡ, ಶಿವಸೇನೆ ಮಾತ್ರ ಪಿಡಿಪಿ ಸಿದ್ಧಾಂತವನ್ನು ವಿರೋಧಿಸಿದೆ ಮತ್ತು ಯಾವಾಗಲೂ ವಿರೋಧಿಸುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ದಿನಕ್ಕೆ ಎರಡು ಗಂಟೆ ನಿದ್ರಿಸುತ್ತಾರೆ, 22 ಗಂಟೆ ಕೆಲಸ ಮಾಡುತ್ತಾರೆ ಎಂದಿದ್ದ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಇದು ಅತಿಯಾದ ಹೊಗಳುಭಟ್ಟತನ'. ಪಾಟೀಲ್ ಅವರ ಹೇಳಿಕೆಯನ್ನು ಕೇಳಿದ ಬಳಿಕ ಪ್ರಧಾನಿ ಮೋದಿ ಉಳಿದಿರುವ ಎರಡು ಗಂಟೆಗಳ ನಿದ್ದೆಯನ್ನು ಕೂಡ ಕಳೆದುಕೊಳ್ಳುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ನಾಯಕನ ಪ್ರಕಾರ, ಇಡೀ ವಿಶ್ವದಲ್ಲಿ ಪ್ರಧಾನಿ ಮೋದಿಯವರ ರೀತಿಯಲ್ಲಿ ಕೆಲಸ ಮಾಡುವವರು ಯಾರೂ ಇಲ್ಲ. ಅಮೆರಿಕದ ಅಧ್ಯಕ್ಷ ಜೋ ಬೈಡನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕೂಡ ಮೋದಿಯವರಂತೆ ಕೆಲಸ ಮಾಡುವುದಿಲ್ಲ' ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.