
ನವದೆಹಲಿ: ಬೆಂಗಳೂರಿನ ನವೋದ್ಯಮ ‘ಸರ್ವಂ ಎ.ಐ’ ನವದೆಹಲಿಯಲ್ಲಿ ನಡೆದ ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಜಾಗತಿಕ ತಂತ್ರಜ್ಞಾನ ದಿಗ್ಗಜರ ಗಮನ ಸೆಳೆದಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ಅವರು, ಭಾರತೀಯ ಕಂಪನಿಗಳು ಸ್ಥಳೀಯ ಎ.ಐ ಮಾದರಿಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತಿವೆ ಎಂಬುದಕ್ಕೆ ಈ ಸಂಸ್ಥೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.
‘ಸರ್ವಂ ಎ.ಐ’ ಭಾರತದ ವಿವಿಧ ಭಾಷೆಗಳು ಮತ್ತು ಸಾಂಸ್ಕೃತಿಕ ಸಂದರ್ಭಗಳಿಗೆ ತಕ್ಕಂತೆ ರೂಪಿಸಲಾದ ಹೊಸ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಎ.ಐ ಕ್ಷೇತ್ರದಲ್ಲಿ ಚಾಟ್‌ಜಿಪಿಟಿ ಮತ್ತು ಕ್ಲೌಡ್‌ನಂತಹ ಜಾಗತಿಕ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡುವ ಶಕ್ತಿಯನ್ನು ಹೊಂದಿದೆ.
ಸರ್ವಂ ವೆಬ್‌ಸೈಟ್‌ನ ಬ್ಲಾಗ್ ಪೋಸ್ಟ್ ಪ್ರಕಾರ, ಇದರ ಚಾಟ್‌ಬಾಟ್ ಇಂಗ್ಲಿಷ್ ಜೊತೆಗೆ 22 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಜೆಮಿನಿ 3ಪ್ರೊ, ಓಪಸ್ 4.5, ಮತ್ತು ಜಿಪಿಟಿ–5.2ನಂತಹ ಪ್ರಮುಖ ಉದ್ಯಮ ಮಾದರಿಗಳಿಗೆ ಹೋಲಿಸಿದರೆ ಭಾರತೀಯ ಭಾಷೆಗಳಲ್ಲಿ ಉತ್ತಮ ನಿಖರತೆಯನ್ನು ಹೊಂದಿದೆ.
ಶೃಂಗಸಭೆಯಲ್ಲಿ ಸರ್ವಂ–30ಬಿ ಮತ್ತು ಸರ್ವಂ–105ಬಿ ಎಂಬ ಎರಡು ಭಾಷಾ ಮಾದರಿಗಳನ್ನು ಸಂಸ್ಥೆಯು ಘೋಷಿಸಿದೆ. ಬಹುಭಾಷಾ ಸಂವಹನ, ಕೋಡಿಂಗ್, ಸಂಶೋಧನೆ ಮತ್ತು ಉದ್ಯಮದ ಅಪ್ಲಿಕೇಷನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
‘ಈ ವರ್ಷದ ಮೇ ತಿಂಗಳೊಳಗೆ ಸ್ಮಾರ್ಟ್ ಕನ್ನಡಕವನ್ನು ಬಿಡುಗಡೆ ಮಾಡಲು ಯೋಜಿಸಿದೆ’ ಎಂದು ಕಂಪನಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಸರ್ವಂ ಸಂಸ್ಥೆಯನ್ನು 2023ರ ಆಗಸ್ಟ್‌ನಲ್ಲಿ ವಿವೇಕ್ ರಾಘವನ್ ಮತ್ತು ಪ್ರತ್ಯೂಷ್ ಕುಮಾರ್ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.