ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತರಾಗಿದ್ದ ಶಶಿಕಲಾ ಅಥವಾ ಅವರ ಕುಟುಂಬ ಸದಸ್ಯರಿಗೆ ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಎಐಎಡಿಎಂಕೆ ಹಿರಿಯ ನಾಯಕ, ತಮಿಳುನಾಡು ಮೀನುಗಾರಿಕೆ ಸಚಿವ ಡಿ ಜಯಕುಮಾರ್ ಶುಕ್ರವಾರ ಹೇಳಿದ್ದಾರೆ.
ಶಶಿಕಲಾ ಬಿಡುಗಡೆ ಸಾಧ್ಯತೆ ಕುರಿತು ಬಿಜೆಪಿ ನಾಯಕ ಆಶೀರ್ವಾದಮ್ ಆಚಾರಿ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಇದೇ ಹಿನ್ನೆಲೆಯಲ್ಲಿ ಜಯಕುಮಾರ್ ಅವರು ಈ ಹೇಳಿಕೆ ನೀಡಿದ್ದಾರೆ. ಶಶಿಕಲಾ ಅವರ ವಿಚಾರದಲ್ಲಿ ಪಕ್ಷದ ನಿರ್ಧಾರ ಅಚಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಜೂನ್ 25 ರಂದು ಬಿಜೆಪಿಯ ದಾಖಲೆ ಮತ್ತು ಗ್ರಂಥಾಲಯ ವಿಭಾಗದ ಸಂಯೋಜಕ ಆಶೀರ್ವಾದಮ್ ಆಚಾರಿ ಅವರು ಶಶಿಕಲಾ ಅವರು ಆಗಸ್ಟ್‌ನಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ ಎಂದು ಟ್ವೀಟ್ ಮಾಡಿದ್ದರು. ‘ಶಶಿಕಲಾ ನಟರಾಜನ್ ಅವರು ಆಗಸ್ಟ್ 14, 2020 ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದರು.
ಈ ಟ್ವೀಟ್ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ‘ ಶಶಿಕಲಾ ಅವರ ಬಿಡುಗಡೆ ಸನ್ನಿಹಿತವಾಗಿದ್ದು, ರಾಜಕೀಯದಲ್ಲಿ ಬದಲಾವಣೆಗಳಾಗಲಿವೆ,’ ಎಂದು ಅವರ ಆಪ್ತರು ಹೇಳಿದ್ದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಜಯಕುಮಾರ್, ಪಕ್ಷದ ನಿರ್ಧಾರ ಅಚಲವಾಗಿದೆ. ಶಶಿಕಲಾ ಕುಟುಂಬದ ಪ್ರಾಬಲ್ಯಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ. ಪಕ್ಷದ ತೀರ್ಮಾನವು ಒಳ್ಳೆಯದನ್ನೇ ಹೊಂದರಲಿದೆ. ಶಶಿಕಲಾ ಅಥವಾ ಅವರ ಕುಟುಂಬಕ್ಕೆ ಎಐಎಡಿಎಂಕೆ ಅಥವಾ ಸರ್ಕಾರದಲ್ಲಿ ಸ್ಥಾನವಿಲ್ಲ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ,’ ಎಂದು ಸ್ಪಷ್ಟವಾಗಿ ಹೇಳಿದರು.
‘ಜೈಲಿನಿಂದ ಬಿಡುಗಡೆಯಾದ ನಂತರ ಶಶಿಕಲಾ ಅವರು ಪಕ್ಷವನ್ನು ಮುನ್ನಡೆಸುವ ಎಂಬ ಬಗ್ಗೆ ಎಐಎಡಿಎಂಕೆ ನಾಯಕತ್ವ ನಿರ್ಧಾರ ತೆಗೆದುಕೊಳ್ಳಲಿದೆ,’ ಎಂಬ ಜವಳಿ ಸಚಿವ ಒ ಎಸ್ ಮಣಿಯನ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಜಯಕುಮಾರ್, ‘ಅದು ಅವರ ವೈಯಕ್ತಿಕ ಅಭಿಪ್ರಾಯ,’ ಎಂದಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಶಶಿಕಲಾ, ಫೆಬ್ರವರಿ 15, 2017 ರಂದು ಬೆಂಗಳೂರು ಕೇಂದ್ರ ಕಾರಾಗೃಹದ ಜೈಲು ಅಧಿಕಾರಿಗಳ ಎದುರು ಶರಣಾಗಿದ್ದರು. ಈ ಪ್ರಕರಣದಲ್ಲಿ ಶಶಿಕಲಾ ಅವರು ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.