
ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತ
(ಚಿತ್ರ ಕೃಪೆ–X)
ಹೈದರಾಬಾದ್: ಸೌದಿ ಅರೇಬಿಯಾದ ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಉಮ್ರಾ ಯಾತ್ರಿಕರ ಬಸ್‌ವೊಂದು ತೈಲ ಸಾಗಾಟದ ಟ್ಯಾಂಕರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ ತೆಲಂಗಾಣದ 45 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ 16 ಮಂದಿ ಹೈದರಾಬಾದ್‌ನ ಬಜಾರ್ ಘಾಟ್ ನಿವಾಸಿಗಳು ಎಂದು ವರದಿಯಾಗಿದೆ.
ಘಟನೆಯಲ್ಲಿ 45 ಜನ ಮೃತಪಟ್ಟಿದ್ದಾರೆ. ಒಬ್ಬರು ಬದುಕುಳಿದಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸಂತ್ರಸ್ತರ ಬಗ್ಗೆ ಮಾಹಿತಿ ಸಂಗ್ರಹಿಸಲು ತೆಲಂಗಾಣ ಸರ್ಕಾರ ಪ್ರಯತ್ನಿಸುತ್ತಿದೆ. ಅಲ್ಲದೇ ಮೃತರ ಕುಟುಂಬಗಳು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಲು ನವದೆಹಲಿಯ ತೆಲಂಗಾಣ ಭವನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ತೆಲಂಗಾಣ ಭವನದ ಹಿರಿಯ ಅಧಿಕಾರಿಗಳು ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಅಪಘಾತದ ಸಂಪೂರ್ಣ ವಿವರ ಮತ್ತು ತೆಲಂಗಾಣದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದನ್ನು ಖಚಿತಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಬಸ್ ಅಪಘಾತದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಸೇರಿದಂತೆ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನಿರ್ದೇಶನ ನೀಡಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಸೌದಿ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯವಿದ್ದರೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸೂಚನೆ ನೀಡಿದ್ದಾರೆ.
ಸಹಾಯವಾಣಿ ಸಂಖ್ಯೆ
ವಿ.ವಂದನಾ, ನಿವಾಸ ಆಯುಕ್ತರು ಮತ್ತು ಸಂಪರ್ಕಾಧಿಕಾರಿ: +919871999044
ಸಿ.ಎಚ್.ಚಕ್ರವರ್ತಿ, ಸಾರ್ವಜನಿಕ ಸಂಪರ್ಕ ಅಧಿಕಾರಿ: +919958322143
ರಕ್ಷಿತ್ ನೈಲ್, ಸಂಪರ್ಕಾಧಿಕಾರಿ: +919643723157.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.