ADVERTISEMENT

ಭಯೋತ್ಪಾದನೆ ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧ ಅಲ್ಲ: ಸುಷ್ಮಾ ಸ್ವರಾಜ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 9:35 IST
Last Updated 1 ಮಾರ್ಚ್ 2019, 9:35 IST
   

ಅಬುದಾಬಿ: ಭಯೋತ್ಪಾದನೆ ವಿರುದ್ಧದಹೋರಾಟ ಯಾವುದೇ ಧರ್ಮದ ವಿರುದ್ಧವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆಸುಷ್ಮಾ ಸ್ವರಾಜ್ ಹೇಳಿದ್ದಾರೆ.ಇಸ್ಲಾಮಿಕ್‌ ರಾಷ್ಟ್ರಗಳ ಸಹಕಾರ ಸಂಘಟನೆ (ಒಐಸಿ) ಶೃಂಗಸಭೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುಷ್ಮಾ ಸ್ವರಾಜ್, ಭಯೋತ್ಪಾದನೆಗೆ ಧರ್ಮವಿಲ್ಲ. ಭಯೋತ್ಪಾದನೆಮತ್ತು ಅದನ್ನು ಬೆಂಬಲಿಸುವವರನ್ನು ನಾವು ವಿರೋಧಿಸುತ್ತೇವೆ ಎಂದಿದ್ದಾರೆ.

ಭಯೋತ್ಪಾದನೆವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧವಲ್ಲ. ಹಾಗೆ ಇರಲೂ ಬಾರದು ಎಂದು ಕುರಾನ್,ಗುರು ಗ್ರಂಥ ಸಾಹಿಬ್ ಮತ್ತು ಋಗ್ವೇದದ ಸಾಲುಗಳನ್ನು ಉಲ್ಲೇಖಿಸಿ ಸುಷ್ಮಾ ಭಾಷಣ ಆರಂಭಿಸಿದ್ದರು.

ನಾನು ಮಹಾತ್ಮ ಗಾಂಧಿಯವರ ದೇಶದಿಂದ ಬಂದಿದ್ದೇನೆ. ನಮ್ಮಲ್ಲಿ ಎಲ್ಲ ಪ್ರಾರ್ಥನೆಗಳೂ ಓಂ ಶಾಂತಿಯಿಂದ ಕೊನೆಗೊಳುತ್ತದೆ.ಅಂದರೆ ಎಲ್ಲ ಕಡೆಯೂ ಶಾಂತಿ ನೆಲೆಸಲಿ ಎಂಬರ್ಥ. ಈ ಜಗತ್ತಿನಲ್ಲಿ ಶಾಂತಿ, ಸೌಹಾರ್ದಕತೆ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಆಗಲಿ ಎಂದು ನಾನು ಆಶಿಸುತ್ತೇನೆ ಎಂದಿದ್ದಾರೆ ಸುಷ್ಮಾ.

ADVERTISEMENT

ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಹಲವಾರು ಹೆಸರು ಮತ್ತು ವರ್ಗೀಕರಣವನ್ನು ಹೊಂದಿರುತ್ತದೆ. ಇದು ಭಿನ್ನವಾದ ಕಾರಣಗಳಿಗೆ ಬಳಕೆಯಾಗುತ್ತದೆ.ಆದರೆ ಪ್ರತಿಯೊಂದು ಸನ್ನಿವೇಶದಲ್ಲಿಯೂ ಧರ್ಮಗಳಿಗೆ ಚ್ಯುತಿ ತರುವ ಮತ್ತು ಅದರ ಶಕ್ತಿಗಳ ಬಗ್ಗೆ ಹುಸಿ ನಂಬಿಕೆಯೊಂದನ್ನು ಹುಟ್ಟು ಹಾಕಲಾಗುತ್ತದೆ. ಮಾನವೀಯತೆಯನ್ನು ಉಳಿಸಿಕೊಳ್ಳಬೇಕಾದರೆ ಭಯೋತ್ಪಾದನೆಗೆ ನೆಲೆ ನೀಡುವ ಮತ್ತು ಆರ್ಥಿಕ ಸಹಾಯ ಮಾಡುವ ರಾಷ್ಟ್ರಗಳು ಉಗ್ರರ ಶಿಬಿರಗಳನ್ನು ನಾಶ ಮಾಡಿ ಅವರಿಗೆ ಸಹಾಯ ನೀಡುವುದನ್ನು ನಿಲ್ಲಿಸಬೇಕು.

ಇಸ್ಲಾಮ್‍ನ ಅರ್ಥ ಶಾಂತಿ ಎಂಬುದು.ಅಲ್ಲಾಹ್‍ನ 99 ಹೆಸರುಗಳೂ ಅಶಾಂತಿ ಎಂಬ ಅರ್ಥವನ್ನು ನೀಡುವುದಿಲ್ಲ. ಅದೇ ರೀತಿ ಜಗತ್ತಿನಲ್ಲಿರುವಪ್ರತಿಯೊಂದು ಧರ್ಮವೂ ಶಾಂತಿ, ಕಾರುಣ್ಯ ಮತ್ತು ಸಹೋದರತೆಯ ಪರವಾಗಿ ನಿಂತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.