ADVERTISEMENT

ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ತವರು ರಾಜ್ಯಗಳಿಗೆ ಕಳುಹಿಸಿ: ಸುಪ್ರೀಂ ಸೂಚನೆ

ಕೇಂದ್ರ, ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದ ಸುಪ್ರೀಂಕೋರ್ಟ್‌

ಪಿಟಿಐ
Published 9 ಜೂನ್ 2020, 7:52 IST
Last Updated 9 ಜೂನ್ 2020, 7:52 IST
ತಮ್ಮ ರಾಜ್ಯಗಳಿಗೆ ತೆರಳಲು ಮುಂಬೈನಲ್ಲಿ ಸಜ್ಜಾಗಿ ನಿಂತಿರುವ ವಲಸೆ ಕಾರ್ಮಿಕರು
ತಮ್ಮ ರಾಜ್ಯಗಳಿಗೆ ತೆರಳಲು ಮುಂಬೈನಲ್ಲಿ ಸಜ್ಜಾಗಿ ನಿಂತಿರುವ ವಲಸೆ ಕಾರ್ಮಿಕರು    

ನವದೆಹಲಿ: ‘ವಲಸೆ ಕಾರ್ಮಿಕರನ್ನು ಅವರ ಸ್ವಂತ ರಾಜ್ಯಗಳಿಗೆ 15 ದಿನಗಳಲ್ಲಿ ಕಳುಹಿಸಲು ಅಗತ್ಯ ಕ್ರಮವಹಿಸಬೇಕು’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿದ ಬಳಿಕ, ಅವರ ಕೌಶಲ ಆಧರಿಸಿ ಉದ್ಯೋಗಾವಕಾಶ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದೂ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿತು.

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸಂಜಯ್‌ ಕಿಶನ್‌ ಕೌಲ್‌, ಎಂ.ಆರ್.ಶಾ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿತು. ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಬೇಡಿಕೆಯನ್ನು ಆಧರಿಸಿ ಹೆಚ್ಚುವರಿ ರೈಲುಗಳ ಸಂಚಾರದ ಸೇವೆಯನ್ನು ಕಲ್ಪಿಸಬೇಕು ಎಂದು ಸೂಚಿಸಿತು.

ADVERTISEMENT

ಲಾಕ್‌ಡೌನ್‌ ನಿಯಮಗಳ ಉಲ್ಲಂಘನೆಗಾಗಿ ವಲಸೆ ಕಾರ್ಮಿಕರ ವಿರುದ್ಧ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯಡಿ ಹೂಡಿರುವ ಮೊಕದ್ದಮೆಗಳನ್ನು ವಾಪಸು ಪಡೆಯುವುದನ್ನು ಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಿತು.

ವಿಚಾರಣೆಯನ್ನು ಜುಲೈ ತಿಂಗಳಿಗೆ ನಿಗದಿಪಡಿಸಿದ ಪೀಠವು ವಲಸೆ ಕಾರ್ಮಿಕರಿಗೆ ಇರುವ ಕಲ್ಯಾಣ, ಉದ್ಯೋಗಾವಾಶ ಯೋಜನೆಗಳ ವಿವರಗಳನ್ನು ನಿಯಮಿತವಾಗಿ ಪ್ರಕಟಿಸಬೇಕು ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.