ADVERTISEMENT

ವಯನಾಡ್‌ನಿಂದ ರಾಹುಲ್‌ ಸ್ಪರ್ಧೆ ಪ್ರಶ್ನಿಸಿದ್ದ ಅರ್ಜಿ ವಜಾ

ಪಿಟಿಐ
Published 17 ಡಿಸೆಂಬರ್ 2022, 13:08 IST
Last Updated 17 ಡಿಸೆಂಬರ್ 2022, 13:08 IST
.
.   

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು 2019ರಲ್ಲಿ ಕೇರಳದ ವಯನಾಡ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ವಯನಾಡ್‌ ಮತ್ತು ಎರ್ನಾಕುಳಂ ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯನ್ನು ಪ್ರಶ್ನಿಸಿ ಸರಿತಾ ಎಸ್‌. ನಾಯರ್‌ ಸಲ್ಲಿಸಿದ್ದ ಅರ್ಜಿಯನ್ನು 2019ರಲ್ಲಿ ಕೇರಳ ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ 2020 ನವೆಂಬರ್‌ 2ರಂದು ವಜಾಗೊಳಿಸಿತ್ತು. ಅರ್ಜಿಯನ್ನು ಮರುಪರಿಶೀಲಿಸಬೇಕೆಂದು ಕೋರಿ ಸರಿತಾ ಅವರು ಮತ್ತೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಮತ್ತು ದೀಪಾಂಕರ್‌ ದತ್ತಾ ಅವರಿದ್ದ ನ್ಯಾಯಾಪೀಠವು ಶುಕ್ರವಾರ ವಜಾಗೊಳಿಸಿದೆ.

ADVERTISEMENT

‘ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಆದ್ದರಿಂದ ಅರ್ಜಿಯನ್ನು ತಳ್ಳಿಹಾಕುತ್ತೇವೆ’ ಎಂದೂ ಹೇಳಿದೆ.

ಸರಿತಾ ಅವರು ವಯನಾಡ್‌ ಮತ್ತು ಎರ್ನಾಕುಳಂ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರವನ್ನು, ಸೌರಫಲಕ ಹಗರಣಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಕಾರಣಕ್ಕೆ ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.