ADVERTISEMENT

ಸಾಮಾಜಿಕ ಮಾಧ್ಯಮ, ಕೆಲ ವಾಹಿನಿಗಳಲ್ಲಿ ಸುಳ್ಳು, ಸೌಹಾರ್ದ ಕದಡುವ ಸುದ್ದಿ: ಸುಪ್ರೀಂ

ಪಿಟಿಐ
Published 2 ಸೆಪ್ಟೆಂಬರ್ 2021, 21:08 IST
Last Updated 2 ಸೆಪ್ಟೆಂಬರ್ 2021, 21:08 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಸುದ್ದಿಗಳಿಗೆ ಕೋಮು ಬಣ್ಣ ಬಳಿಯುವ ಮಾಧ್ಯಮದ ಒಂದು ವರ್ಗವು ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ. ಪೋರ್ಟಲ್‌ಗಳು, ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವಿಕೆಯು ಬಗ್ಗೆಯೂ ನ್ಯಾಯಾಲಯವು ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ಸಾಮಾಜಿಕ ಮಾಧ್ಯಮವು ‘ಪ್ರಬಲ ಧ್ವನಿ’ಗಳ ಮಾತನ್ನು ಮಾತ್ರ ಕೇಳುತ್ತದೆ. ನ್ಯಾಯಮೂರ್ತಿಗಳು ಮತ್ತು ಸಂಸ್ಥೆಗಳ ಮಾತನ್ನು ಕೂಡ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನಿಜಾಮುದ್ದೀನ್‌ ಮರ್ಕಜ್‌ನಲ್ಲಿ ಕಳೆದ ವರ್ಷ ನಡೆದ ಧಾರ್ಮಿಕ ಸಮಾವೇಶದ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಜಮೀಯತ್‌ ಉಲೇಮಾ ಎ ಹಿಂದ್‌ ಮತ್ತು ಇತರ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು.

‘ಸಮಸ್ಯೆ ಏನೆಂದರೆ, ಈ ದೇಶದಲ್ಲಿ ಎಲ್ಲವನ್ನೂ ಕೋಮುವಾದಿ ಕೋನದಿಂದಲೇ ನೋಡುವ ಮಾಧ್ಯಮದ ಒಂದು ವರ್ಗ ಇದೆ. ಅಂತಿಮವಾಗಿ ಇದರಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ಖಾಸಗಿ ವಾಹಿನಿಗಳನ್ನು ನಿಯಂತ್ರಿಸುವ ಪ್ರಯತ್ನವನ್ನು ನೀವು (ಕೇಂದ್ರ) ಎಂದಾದರೂ ಮಾಡಿದ್ಧೀರಾ’ ಎಂದು ಪೀಠವು ಪ್ರಶ್ನಿಸಿತು.

ADVERTISEMENT

ಕೋಮುವಾದಿ ದೃಷ್ಟಿಯಿಂದ ನೋಡುವುದು ಮಾತ್ರವಲ್ಲ, ಸುದ್ದಿಗಳನ್ನು ಸೃಷ್ಟಿಸುವ ಕೆಲಸವೂ ನಡೆಯುತ್ತಿದೆ. ವೆಬ್‌ ಪೋರ್ಟಲ್‌ಗಳು ಸೇರಿದಂತೆ ಅಂತರ್ಜಾಲದಲ್ಲಿರುವ ಸುದ್ದಿಗಳನ್ನು ನಿಯಂತ್ರಿಸಲು ಐಟಿ ನಿಯಮಗಳನ್ನು ರೂಪಿಸಲಾಗಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿನ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮೆಹ್ತಾ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕಳೆದ ನವೆಂಬರ್ 13ರಂದು ಸಲ್ಲಿಸಿದ್ದ ಪ್ರಮಾಣಪತ್ರವನ್ನು ಉಲ್ಲೇಖಿಸಿದರು.

ನ್ಯಾಯಮೂರ್ತಿಗಳೂ ಲೆಕ್ಕಕ್ಕಿಲ್ಲ: ‘ಸಾಮಾಜಿಕ ಜಾಲತಾಣಗಳು, ಟ್ವಿಟರ್‌ ಮತ್ತು ಫೇಸ್‌ಬುಕ್ ಸಾಮಾನ್ಯ ಜನರಿಗೆ ಸ್ಪಂದಿಸಿದ್ದನ್ನು ನಾನು ಕಂಡಿಲ್ಲ. ಈ ಸಂಸ್ಥೆಗಳು ಪ್ರತಿಕ್ರಿಯೆಯನ್ನೇ ನೀಡುವುದಿಲ್ಲ. ಈ ಸಂಸ್ಥೆಗಳಿಗೆ ಹೊಣೆಗಾರಿಕೆ ಇಲ್ಲ. ಸಂಸ್ಥೆಗಳ ಬಗ್ಗೆ ಕೆಟ್ಟದಾಗಿ ಬರೆಯಲಾಗಿದೆ. ಅದಕ್ಕೂ ಸಾಮಾಜಿಕ ಜಾಲತಾಣ ಸಂಸ್ಥೆಗಳು ಸ್ಪಂದಿಸುವುದಿಲ್ಲ. ಅದು ಬರೆದವರ ಹಕ್ಕು ಎಂದು ಈ ಸಂಸ್ಥೆಗಳು ಹೇಳುತ್ತವೆ. ಈ ಸಂಸ್ಥೆಗಳು ಪ್ರಭಾವಿ ವ್ಯಕ್ತಿಗಳ ಬಗ್ಗೆ ಮಾತ್ರ ಗಮನ ಹರಿಸುತ್ತವೆಯೇ ಹೊರತು ನ್ಯಾಯಮೂರ್ತಿಗಳು, ಸಂಸ್ಥೆಗಳು ಅಥವಾ ಸಾಮಾನ್ಯ ಜನರ ಬಗ್ಗೆ ಅಲ್ಲ. ಇದು ನಮ್ಮ ಕಣ್ಣೆದುರು ಇರುವ ಸತ್ಯ. ಇದು ನಮ್ಮ ಅನುಭವ’ ಎಂದು ರಮಣ ವಿವರಿಸಿದರು.

‘ವೆಬ್‌ ‍ಪೋರ್ಟಲ್‌ಗಳು ಮತ್ತು ಯೂಟ್ಯೂಬ್‌ ವಾಹಿನಿಗಳಲ್ಲಿರುವ ಸುಳ್ಳು ಸುದ್ದಿ ಮತ್ತು ಮಾನಹಾನಿಕಾರಕ ಕಂಟೆಂಟ್‌ಗಳ ಮೇಲೆ ನಿಯಂತ್ರಣವೇ ಇಲ್ಲ. ಸುಳ್ಳು ಸುದ್ದಿ ಮುಕ್ತವಾಗಿ ಹರಿದಾಡುತ್ತಿರುವುದು ಯೂಟ್ಯೂಬ್‌ ನೋಡಿದರೆ ತಿಳಿಯುತ್ತದೆ. ಯೂಟ್ಯೂಬ್‌ನಲ್ಲಿ ಯಾರು ಬೇಕಿದ್ದರೂ ವಾಹಿನಿ ಆರಂಭಿಸಬಹುದು’ ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.