ADVERTISEMENT

ಇಸ್ಕಾನ್‌ ಬೆಂಗಳೂರು: ಸುಪ್ರೀಂ ಕೋರ್ಟ್‌ ಭಿನ್ನ ಮತದ ತೀರ್ಪು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 15:29 IST
Last Updated 8 ನವೆಂಬರ್ 2025, 15:29 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಬೆಂಗಳೂರಿನ ಇಸ್ಕಾನ್‌ ಘಟಕದ ಆಸ್ತಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಸ್ಕಾನ್‌ ಮುಂಬೈ ಘಟಕವು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಭಿನ್ನ ಮತದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ಅಗಸ್ಟಿನ್‌ ಜಾರ್ಜ್‌ ಮಸೀಹ್‌ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದ್ದು, ಮುಂದಿನ ನಿರ್ದೇಶನಗಳಿಗಾಗಿ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಮುಂದೆ ಇಡಲು ಸೂಚಿಸಿದೆ.  

ನ್ಯಾಯಮೂರ್ತಿ ಮಾಹೇಶ್ವರಿ ಅವರು, ಮುಕ್ತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಅನುಮತಿ ನೀಡಿ, ಕಕ್ಷಿದಾರರಿಗೆ ನೋಟಿಸ್‌ ಜಾರಿಗೊಳಿಸಿದರು.

ADVERTISEMENT

ನ್ಯಾಯಮೂರ್ತಿ ಅಗಸ್ಟಿನ್‌ ಅವರು, ‘ಮೇ 16ರಂದು ನೀಡಿದ್ದ ತೀರ್ಪಿನಲ್ಲಿ ಮೇಲ್ನೋಟಕ್ಕೆ ಯಾವುದೇ ದೋಷ ಕಂಡುಬಂದಿಲ್ಲ, ಈ ಬಗ್ಗೆ ತೃಪ್ತಿ ಇದೆ’ ಎಂದು ಅಭಿಪ್ರಾಯಪಟ್ಟು, ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದರು. 

ಏನಿದು ಪ್ರಕರಣ:

ಬೆಂಗಳೂರಿನ ಇಸ್ಕಾನ್‌ ಘಟಕದ ಆಸ್ತಿಯು ಮುಂಬೈನ ಇಸ್ಕಾನ್‌ ಘಟಕದ ನಿಯಂತ್ರಣಕ್ಕೆ ಸೇರಿದೆ ಎಂದು ಕರ್ನಾಟಕ ಹೈಕೋರ್ಟ್‌  2011ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ, ಇಸ್ಕಾನ್ ಬೆಂಗಳೂರು ಘಟಕ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮೇ 16 ರಂದು ಮಾನ್ಯ ಮಾಡಿತ್ತು.

ಬೆಂಗಳೂರಿನಲ್ಲಿರುವ ಇಸ್ಕಾನ್‌ ದೇವಸ್ಥಾನವು, ಕರ್ನಾಟಕ ಸಂಘಗಳ ಕಾಯ್ದೆಯಡಿ ನೋಂದಾಯಿಸಲಾಗಿರುವ ಬೆಂಗಳೂರಿನ ಇಸ್ಕಾನ್‌ ಸೊಸೈಟಿ ಭಾಗವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್‌.ಎಸ್. ಓಕಾ ಮತ್ತು ಅಗಸ್ಟಿನ್‌ ಜಾರ್ಜ್ ಮಸೀಹ್ ಅವರ ಪೀಠವು ಹೇಳಿತ್ತು.

‘ಇಸ್ಕಾನ್‌ ಮುಂಬೈ ಘಟಕಕ್ಕೆ ಬೆಂಗಳೂರು ಘಟಕದ ಜಮೀನನ್ನು ಹಂಚಿಕೆ ಮಾಡಿರುವ ಯಾವುದೇ ದಾಖಲೆಗಳು, ಪತ್ರಗಳು ಪರಿಶೀಲನೆಯಲ್ಲಿ ಕಂಡುಬಂದಿಲ್ಲ  ‘ಬೆಂಗಳೂರು ಶಾಖೆ’ ಎನ್ನುವ ಪದವೂ ಯಾವುದೇ ಭೌತಿಕ ದಾಖಲೆಗಳಲ್ಲಿ ಕಂಡುಬಂದಿಲ್ಲ. ಇದು ದಾಖಲೆ, ಸಾಕ್ಷ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದ ಪೀಠ, ಕರ್ನಾಟಕ ಹೈಕೋರ್ಟ್‌ ಆದೇಶವನ್ನು ರದ್ದುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.