ADVERTISEMENT

ಅಸ್ಸಾಂ–ಮೇಘಾಲಯ ಗಡಿ ವಿವಾದ: ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ’ ತಡೆ

ಪಿಟಿಐ
Published 6 ಜನವರಿ 2023, 16:01 IST
Last Updated 6 ಜನವರಿ 2023, 16:01 IST
.
.   

ನವದೆಹಲಿ: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವಿನ ಗಡಿ ಒಪ್ಪಂದವನ್ನು ಕಾರ್ಯಗತಗೊಳಿಸುವುದಕ್ಕೆ ಮೇಘಾಲಯ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ.

ಈ ಒಪ್ಪಂದವು ಸಂವಿಧಾನದ 3ನೇ ಪರಿಚ್ಛೇದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ನಾಲ್ವರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ADVERTISEMENT

ಹೊಸ ರಾಜ್ಯಗಳ ರಚನೆ ಮತ್ತು ಅಸ್ತಿತ್ವದಲ್ಲಿರುವ ರಾಜ್ಯಗಳ ಗಡಿಗಳ ಬದಲಾವಣೆಗೆ ಸಂಬಂಧಿಸಿದ ಕಾನೂನು ರಚಿಸಲು 3ನೇ ಪರಿಚ್ಛೇದವು ಸಂಸತ್‌ಗೆ ಅಧಿಕಾರ ನೀಡುತ್ತದೆ.

ಗಡಿ ಒಪ್ಪಂದದ ಬಳಿಕ ಭೌತಿಕ ಗಡಿರೇಖೆ ಗುರುತಿಸುವ ಕಾರ್ಯಕ್ಕೆ ಮೇಘಾಲಯ ಹೈಕೋರ್ಟ್‌ನ ಏಕಸದಸ್ಯ ಪೀಠವು ಡಿಸೆಂಬರ್‌ 8ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಉಭಯ ರಾಜ್ಯಗಳ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಉಂಟಾಗುವ 12 ಪ್ರದೇಶಗಳ ಪೈಕಿ ಕನಿಷ್ಠ ಆರರಲ್ಲಿ ಗಡಿರೇಖೆ ಗುರುತಿಸುವ ಒಪ್ಪಂದಕ್ಕೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಕೆ. ಸಂಗ್ಮಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ಸಹಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.