
ನವದೆಹಲಿ: ನ್ಯಾಯಮಂಡಳಿ ಸುಧಾರಣೆಗಳು (ಸರಳೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗುರುವಾರ ಸಿಟ್ಟಿಗೆದ್ದಿತು.
‘ಕೇಂದ್ರ ಸರ್ಕಾರದ ಇಂಥ ತಂತ್ರಗಳನ್ನು ನಾವು ಒಪ್ಪುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠವು ಎಚ್ಚರಿಕೆ ನೀಡಿತು. ‘ಈ ಅರ್ಜಿಗಳ ವಿಚಾರಣೆಯನ್ನು ನಮ್ಮ ಈ ಪೀಠ ನಡೆಸುವುದು ಕೇಂದ್ರ ಸರ್ಕಾರಕ್ಕೆ ಇಷ್ಟವಿದ್ದಂತೆ ಇಲ್ಲ. ಆದ್ದರಿಂದ ನಮ್ಮನ್ನು ತಪ್ಪಿಸಿ ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಕೇಳುತ್ತಿದೆ’ ಎಂದು ಸಿಜಿಐ ಅಭಿಪ್ರಾಯಪಟ್ಟರು.
‘ಬೇರೆ ಪ್ರಕರಣಗಳಲ್ಲಿ ಅಟಾರ್ನಿ ಜನರಲ್ ಅವರು ವ್ಯಸ್ತರಾಗಿದ್ದಾರೆ. ಆದ್ದರಿಂದ ವಿಚಾರಣೆಯನ್ನು ಮುಂದೂಡಿ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಪೀಠಕ್ಕೆ ಮನವಿ ಮಾಡಿದರು. ‘ಈ ರೀತಿಯ ವರ್ತನೆ ಸರಿಯಲ್ಲ. ನಾವು ಅವರಿಗೆ ಸಾಕಷ್ಟು ಸಮಯ ನೀಡಿದ್ದೇವೆ’ ಎಂದು ಸಿಜೆಐ ಹೇಳಿದರು.
2021ರಂದು ಜಾರಿಗೊಂಡ ಈ ಕಾಯ್ದೆಯ ಅನ್ವಯ, ಹಲವು ರೀತಿಯ ನ್ಯಾಯಮಂಡಳಿಗಳು ರದ್ದಾಗಿವೆ. ಈ ನ್ಯಾಯಮಂಡಳಿಗಳ ನ್ಯಾಯಾಂಗ ಮತ್ತು ಇತರ ಸದಸ್ಯರ ನೇಮಕ ಮತ್ತು ಕಾರ್ಯಾವಧಿಯಲ್ಲಿ ಹಲವು ಬದಲಾವಣೆಗಳನ್ನು ಈ ಕಾಯ್ದೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.