ADVERTISEMENT

ನಾರದಾ ಪ್ರಕರಣ: 25ರಂದು ಮಮತಾ, ಸಚಿವ ಘಟಕ್‌ ಅರ್ಜಿ ವಿಚಾರಣೆ– ‘ಸುಪ್ರೀಂ‘

ಕಲ್ಕತ್ತ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಅರ್ಜಿ

ಪಿಟಿಐ
Published 22 ಜೂನ್ 2021, 11:54 IST
Last Updated 22 ಜೂನ್ 2021, 11:54 IST
   

ನವದೆಹಲಿ: ‘ನಾರದಾ ಸ್ಟಿಂಗ್‌ ಆಪರೇಷನ್‌ ಟೇಪ್‌’ ಪ್ರಕರಣಕ್ಕೆ ಸಂಬಂಧಿಸಿ ಕಲ್ಕತ್ತ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾನೂನು ಸಚಿವ ಮಲಯ್‌ ಘಟಕ್ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಜೂನ್ 25ರಂದು ನಡೆಸಲು ಸುಪ್ರೀಂಕೋರ್ಟ್‌ ಮಂಗಳವಾರ ನಿರ್ಧರಿಸಿದೆ.

ಮಮತಾ ಬ್ಯಾನರ್ಜಿ, ಘಟಕ್‌ ಅವರ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಅನಿರುದ್ಧ ಬೋಸ್‌ ಅವರಿರುವ ರಜಾಕಾಲದ ನ್ಯಾಯಪೀಠ ನಡೆಸಬೇಕಿತ್ತು. ಆದರೆ, ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ನ್ಯಾಯಮೂರ್ತಿ ಬೋಸ್‌ ಪ್ರಕಟಿಸಿದರು.

ಹೀಗಾಗಿ, ಈ ವಿಷಯವನ್ನು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರ ಗಮನಕ್ಕೆ ತರಲಾಯಿತು. ನಂತರ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ವಿನೀತ್‌ ಸರನ್ ಹಾಗೂ ದಿನೇಶ್‌ ಮಾಹೇಶ್ವರಿ ಅವರಿರುವ ನ್ಯಾಯಪೀಠಕ್ಕೆ ವರ್ಗಾಯಿಸಲಾಯಿತು.

ADVERTISEMENT

ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, ಅರ್ಜಿದಾರರ ಪರ ವಕೀಲರಾದ ರಾಕೇಶ್‌ ದ್ವಿವೇದಿ ಮತ್ತು ವಿಕಾಸ್‌ ಸಿಂಗ್‌ ಅವರ ಅಭಿಪ್ರಾಯವನ್ನು ಪಡೆದ ನ್ಯಾಯಪೀಠ, ಜೂನ್‌ 25ರಂದು ಅರ್ಜಿಗಳ ವಿಚಾರಣೆ ನಡೆಸುವುದಾಗಿ ಆದೇಶ ಹೊರಡಿಸಿತು.

‘ನಾರದಾ ಸ್ಟಿಂಗ್‌ ಆಪರೇಷನ್‌ ಟೇಪ್‌’ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಟಿಎಂಸಿ ಮುಖಂಡರನ್ನು ಮೇ 17ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ಮುಖಂಡರನ್ನು ಬಂಧಿಸಿದ ನಂತರ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಿಬಿಐಗೆ ಟಿಎಂಸಿ ಮುಖಂಡರು ಅಡ್ಡಿಪಡಿಸಿದ್ದರು ಎಂದು ಆರೋಪಿಸಲಾಗಿದೆ.

ನಂತರ, ಪ್ರಕರಣದ ವಿಚಾರಣೆಯನ್ನು ಸಿಬಿಐನ ವಿಶೇಷ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಸಿಬಿಐ ಅರ್ಜಿ ಸಲ್ಲಿಸಿತ್ತು.

ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿಪ್ರಮಾಣಪತ್ರ ಸಲ್ಲಿಸಲು ಅನುಮತಿ ಕೋರಿ ಮಮತಾ ಬ್ಯಾನರ್ಜಿ, ಸಚಿವ ಘಟಕ್‌ ಹಾಗೂ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಮಾಣಪತ್ರ ಸಲ್ಲಿಕೆಗೆ ಅನುಮತಿ ನೀಡಲು ನಿರಾಕರಿಸಿ, ಜೂನ್‌ 9ರಂದು ಕಲ್ಕತ್ತ ಹೈಕೋರ್ಟ್‌ ಆದೇಶಿಸಿತ್ತು.

ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಮೊದಲು ರಾಜ್ಯ ಸರ್ಕಾರ ಹಾಗೂ ಸಚಿವ ಘಟಕ್‌ ಅವರಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ನಂತರ, ಮಮತಾ ಬ್ಯಾನರ್ಜಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.