ADVERTISEMENT

ಅಕ್ರಮ ಸ್ವಾಧೀನ: ಭೂಮಿ ಮರಳಿಸಲು ‘ಸುಪ್ರೀಂ’ ಸೂಚನೆ

ರಕ್ಷಣಾ ಉದ್ದೇಶಕ್ಕೆ 4 ಎಕರೆ ವಶಕ್ಕೆ ಪಡೆದಿದ್ದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:07 IST
Last Updated 24 ನವೆಂಬರ್ 2020, 21:07 IST

ನವದೆಹಲಿ: ‘ಆರ್ಥಿಕ ಸ್ವಾತಂತ್ರ್ಯವು ಪ್ರತಿಯೊಬ್ಬರಿಗೂ ಸಂವಿಧಾನದ ಅಡಿ ಖಾತರಿಪಡಿಸಲಾದ ಅಮೂಲ್ಯ ಹಕ್ಕಾಗಿದೆ. ಹಾಗಾಗಿ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ವೈಯಕ್ತಿಕ ಆಸ್ತಿಯನ್ನು ಅನಿರ್ದಿಷ್ಟ ಅವಧಿಗೆ ಅತಿಕ್ರಮಿಸುವುದು ಕಾನೂನುಬಾಹಿರ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರವು ರಕ್ಷಣಾ ಉದ್ದೇಶಕ್ಕಾಗಿ ವಶಪಡಿಸಿಕೊಂಡಿರುವ ಬೆಂಗಳೂರು ದಕ್ಷಿಣ ಭಾಗದಲ್ಲಿನ 4 ಎಕರೆ ಭೂಮಿಯನ್ನು ಮರಳಿಸುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿ ರಾಜ್ಯ ಹೈಕೋರ್ಟ್‌ 2008ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ಬಿ.ಕೆ. ರವಿಚಂದ್ರ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ರವೀಂದ್ರ ಭಟ್‌ ಅವರಿದ್ದ ಪೀಠ ಈ ರೀತಿ ಹೇಳಿದೆ.

‘ವ್ಯಕ್ತಿಯೊಬ್ಬರ ಆಸ್ತಿಯನ್ನು ಅನಿರ್ದಿಷ್ಟ ಅವಧಿಗೆ ಸ್ವಾಧೀನಕ್ಕೆ ಪಡೆಯುವ ಹಕ್ಕು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಪ್ರತಿಪಾದಿಸುವುದು ಕಾನೂನುಬಾಹಿರ ನಡೆಯೇ ಆಗಿದೆ’ ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿ ವಜಾಗೊಳಿಸಿರುವ ಹೈಕೋರ್ಟ್‌ ಆದೇಶವು ದೋಷಪೂರಿತವಾಗಿದೆ ಎಂದೂ ಹೇಳಿದೆ.

ADVERTISEMENT

ಭೂಮಿಯನ್ನು ಸ್ವಾಧೀನಕ್ಕೆ ಪಡೆದು ವರ್ಷಗಳೇ ಗತಿಸಿವೆ. ಹಾಗಾಗಿ, 3 ತಿಂಗಳೊಳಗೆ ಸಂಬಂಧಿಸಿದವರಿಗೆ ಭೂಮಿಯನ್ನು ಹಸ್ತಾಂತರಿಸಬೇಕು ಎಂದು ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪ್ರತಿ 5 ವರ್ಷಕ್ಕೆ ಅನ್ವಯವಾಗುವಂತೆ ಪುನರಾವರ್ತಿತ ವಾರ್ಷಿಕ ಮೌಲ್ಯ ಆಧರಿಸಿ, 20 ವರ್ಷಗಳ ಅವಧಿಗೆ ಪರಿಹಾರ ಕೋರಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿರುವ ಪೀಠವು, ದಾವೆಯ ₹ 75,000 ವೆಚ್ಚವನ್ನು ಭರಿಸುವಂತೆಯೂ ಕೇಂದ್ರಕ್ಕೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.