ADVERTISEMENT

ವೈದ್ಯಕೀಯ ಕಾಲೇಜುಗಳ ಸೂಪರ್‌ ಸ್ಪೆಷಾಲಿಟಿ ಸೀಟು: ಸೇವಾ ನಿರತರಿಗೆ ಶೇ 50 ಮೀಸಲು

ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ‘ಸುಪ್ರೀಂ’ ಬಲ

ಪಿಟಿಐ
Published 16 ಮಾರ್ಚ್ 2022, 22:25 IST
Last Updated 16 ಮಾರ್ಚ್ 2022, 22:25 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ತನ್ನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ‘ಸೂಪರ್‌ ಸ್ಪೆಷಾಲಿಟಿ’ ಕೋರ್ಸ್‌ಗಳ ಸೀಟುಗಳಲ್ಲಿ ಶೇ 50ರಷ್ಟನ್ನು, ಸೇವೆಯಲ್ಲಿದ್ದು ‘ನೀಟ್‌’ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆಹಂಚಿಕೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್, ಬಿ.ಆರ್. ಗವಾಯಿ ಅವರನ್ನೊಳಗೊಂಡ ಪೀಠ, ಈ ಕುರಿತ ಕೋಟಾವನ್ನು ಮುಂದುವರಿಸಲು ಸರ್ಕಾರಕ್ಕೆ ಅನುಮತಿ ನೀಡಿತು.

ತಮಿಳುನಾಡು ರಾಜ್ಯವು ಮೀಸಲಾತಿ ಅನ್ವಯ ಶೈಕ್ಷಣಿಕ ವರ್ಷಕ್ಕೆ ಕೌನ್ಸೆಲಿಂಗ್ ಮುಂದುವರಿಸಲು ಸ್ವತಂತ್ರವಾಗಿದೆ ಎಂದ ಪೀಠವು, ಈ ಕುರಿತ ಅರ್ಜಿಯ ಮುಂದಿನ ವಿಚಾರಣೆಯನ್ನು ಗುರುವಾರದಿಂದ ಆರಂಭವಾಗಲಿರುವ ಹೋಳಿ ರಜೆಯ ಬಳಿಕ ತೆಗೆದುಕೊಳ್ಳುವುದಾಗಿ ತಿಳಿಸಿತು.

ADVERTISEMENT

ತಮಿಳುನಾಡು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 14ರಂದು ಸುಪ್ರೀಂ ಕೋರ್ಟ್‌ ಆದೇಶವನ್ನು ಕಾಯ್ದಿರಿಸಿತ್ತು.

ತಮಿಳುನಾಡು ಸರ್ಕಾರದ ಪರವಾಗಿ ಹಾಜರಾಗಿದ್ದಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಅಮಿತ್ ಆನಂದ್ ತಿವಾರಿ, ನ್ಯಾಯಾಲಯಇಂತಹ ನಿರ್ಧಾರಕ್ಕೆ ತಡೆ ನೀಡಿದರೆ, ಬಡ ಮತ್ತು ಗ್ರಾಮೀಣ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಯ ಲಭ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದರ ಜತೆಗೆ ಅರ್ಹ ಶಿಕ್ಷಕರ ಕೊರತೆಯಿಂದ ಕೋರ್ಸ್‌ಗಳನ್ನು ಮುಚ್ಚಬೇಕಾಗುತ್ತದೆ ಎಂದು ವಾದಿಸಿದರು.

ಅಲ್ಲದೆ, ಸೇವೆಯಲ್ಲಿ ಇಲ್ಲದ ಶೇ 70ರಷ್ಟು ಅಭ್ಯರ್ಥಿಗಳು ಕಡ್ಡಾಯ ಸೇವಾ ಬಾಂಡ್‌ನ ಷರತ್ತುಗಳನ್ನು ಇಲ್ಲಿಯವರೆಗೆ ಪೂರೈಸಿಲ್ಲ ಎಂಬುದನ್ನು ಎಎಜಿ ಅವರು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದರು.

ತಮಿಳುನಾಡು ಸರ್ಕಾರ 2020ರಲ್ಲಿ ಹೊರಡಿಸಿದ್ದ ಆದೇಶದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸೂಪರ್‌ ಸ್ಪೆಷಾಲಿಟಿ ಸೀಟುಗಳಲ್ಲಿ (ಡಿ.ಎಂ/ಎಂ.ಸಿಎಚ್‌) ಶೇ 50ರಷ್ಟನ್ನು ಸೇವಾ ನಿರತ ‘ನೀಟ್‌’ ಅರ್ಹ ಅಭ್ಯರ್ಥಿಗಳಿಗೆ ಹಂಚಲು ನಿರ್ದೇಶಿಸಿದೆ. ಉಳಿದ ಶೇ 50ರಷ್ಟು ಸೀಟುಗಳನ್ನು ಕೇಂದ್ರ ಸರ್ಕಾರ/ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಭರ್ತಿ ಮಾಡಲಿದ್ದಾರೆ ಎಂದು ಎಎಜಿ ಸಮರ್ಥಿಸಿಕೊಂಡರು.

‘ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಸೀಟುಗಳ ಹಂಚಿಕೆಯು ಮೀಸಲಾತಿ ಸ್ವರೂಪದಲ್ಲಿಲ್ಲ. ಬದಲಿಗೆ ಅದು ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ಪ್ರತ್ಯೇಕ ಮೂಲವಾಗಿದೆ‌. ರಾಜ್ಯವು ಅಂತಹ ಪ್ರತ್ಯೇಕ ಪ್ರವೇಶದ ಮೂಲವನ್ನು ಒದಗಿಸುವ ಅಧಿಕಾರ ಹೊಂದಿದೆ’ ಎಂದ ತಿವಾರಿ, ಇದು ಸಾರ್ವಜನಿಕರ ಹಿತ ಕಾಯುವ ಸರ್ಕಾರದ ನೀತಿ ನಿರ್ಧಾರವಾಗಿದೆ ಎಂದರು. ಅಲ್ಲದೆ ಇದು ಯಾವುದೇ ರೀತಿಯಲ್ಲೂ ಕೇಂದ್ರ ಸರ್ಕಾರ ಸೂಚಿಸಿರುವ ಕನಿಷ್ಠ ಮಾನದಂಡಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲಎಂದು ತಿವಾರಿ ವಾದಿಸಿದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ದುಷ್ಯಂತ್ ದವೆ, ಶ್ಯಾಮ್ ದಿವಾನ್ ಮತ್ತು ಗೋಪಾಲ್ ಶಂಕರನಾರಾಯಣನ್ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.