ADVERTISEMENT

ಸಿಂಘು ಗಡಿ ನಿರ್ಬಂಧ ತೆರವಿಗೆ ಕೋರಿ ಅರ್ಜಿ: ಸುಪ್ರೀಂ ನಕಾರ

ಹೈಕೋರ್ಟ್‌ಗೆ ಹೋಗಲು ಸೋನಿಪತ್ ನಿವಾಸಿಗಳಿಗೆ ಸಲಹೆ

ಪಿಟಿಐ
Published 6 ಸೆಪ್ಟೆಂಬರ್ 2021, 12:37 IST
Last Updated 6 ಸೆಪ್ಟೆಂಬರ್ 2021, 12:37 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದೆಹಲಿ ಮತ್ತು ಹರಿಯಾಣವನ್ನು ಸಂಪರ್ಕಿಸುವ ರಸ್ತೆಗಳಿರುವ ಸಿಂಘು ಗಡಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಕೋರಿ ಸೋನಿಪತ್ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಹೈಕೋರ್ಟ್ ಮೊರೆ ಹೋಗುವಂತೆ ಅರ್ಜಿದಾರರಿಗೆ ಸೋಮವಾರ ಸಲಹೆ ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ವಿಕ್ರಂ ನಾಥ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು, ‘ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಲು ಸ್ವತಂತ್ರರು. ಪ್ರತಿಭಟಿಸುವ ಸ್ವಾತಂತ್ರ್ಯ ಮತ್ತು ಮೂಲಸೌಕರ್ಯಗಳ ಪ್ರವೇಶ ಕುರಿತಂತೆ ರಾಜ್ಯದ ಆಡಳಿತಗಳಿಗೆ ನಿರ್ದೇಶನ ನೀಡಲು ಹೈಕೋರ್ಟ್ ಸಶಕ್ತವಾಗಿದೆ’ ಎಂದು ತಿಳಿಸಿತು.

ನಂತರ ಅರ್ಜಿದಾರರಿಗೆ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿದ ಪೀಠವು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋಗಬಹುದು ಎಂದು ಹೇಳಿತು.

ADVERTISEMENT

‘ಸ್ಥಳೀಯ ಸಮಸ್ಯೆಗಳನ್ನು ಅಲ್ಲಿನ ಹೈಕೋರ್ಟ್‌ಗಳೇ ನಿರ್ವಹಿಸಬಹುದು. ಉದಾಹರಣೆಗೆ ನಾಳೆ ಕರ್ನಾಟಕ ಮತ್ತು ಕೇರಳ ಅಥವಾ ಇತರ ರಾಜ್ಯಗಳ ನಡುವೆ ಗಡಿ ವಿವಾದ ಉಂಟಾಯಿತು ಎಂದು ಭಾವಿಸೋಣ. ಆಗ ಅವುಗಳಿಗೆ ಸುಪ್ರೀಂ ಕೋರ್ಟ್ ಮೊದಲ ಆದ್ಯತೆಯಲ್ಲ. ಸ್ಥಳೀಯ ಸಮಸ್ಯೆಗಳನ್ನು ನಿಭಾಯಿಸಲು ಹೈಕೋರ್ಟ್‌ಗಳಿವೆ. ನಮ್ಮಲ್ಲಿ ಸದೃಢವಾದ ವ್ಯವಸ್ಥೆಗಳಿವೆ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಸೋನಿಪತ್ ನಿವಾಸಿಗಳಾದ ಅರ್ಜಿದಾರರಾದ ಜೈ ಭಗವಾನ್, ಜಗ್ಬೀರ್ ಸಿಂಗ್ ಚಿಕಾರಾ ಪರವಾಗಿ ವಕೀಲ ಅಭಿಮನ್ಯ ಭಂಡಾರ ಅರ್ಜಿ ಸಲ್ಲಿಸಿದ್ದರು.

‘ಸಿಂಘು ಗಡಿಯಲ್ಲಿರುವ ಹೆದ್ದಾರಿಯನ್ನು ಕಳೆದ ವರ್ಷ ನವೆಂಬರ್‌ನಿಂದ ನಿರ್ಬಂಧಿಸಲಾಗಿದೆ. ಇದರಿಂದಾಗಿ ವೈದ್ಯಕೀಯ ನೆರವು ಅಗತ್ಯವಿರುವ ರೋಗಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹಾಗಾಗಿ, ಸಿಂಘು ಗಡಿಯಲ್ಲಿ ದೆಹಲಿ ಮತ್ತು ಹರಿಯಾಣವನ್ನು ಸಂಪರ್ಕಿಸುವ ರಸ್ತೆಗಳನ್ನು ಮುಕ್ತಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.