ADVERTISEMENT

ಜನಸಂಖ್ಯೆ ನಿಯಂತ್ರಣಕ್ಕೆ ಎರಡು ಮಕ್ಕಳ ನಿಯಮ: ಪಿಐಎಲ್‌ ತಿರಸ್ಕರಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 14:47 IST
Last Updated 18 ನವೆಂಬರ್ 2022, 14:47 IST
ವಿಶ್ವ ಜನಸಂಖ್ಯಾ ದಿನಾಚರಣೆಯ ಲೋಗೊ
ವಿಶ್ವ ಜನಸಂಖ್ಯಾ ದಿನಾಚರಣೆಯ ಲೋಗೊ   

ನವದೆಹಲಿ: ದೇಶದಾದ್ಯಂತ ಜನಸಂಖ್ಯಾ ನಿಯಂತ್ರಣ ನೀತಿ ಮತ್ತು ಎರಡು ಮಕ್ಕಳ ನಿಯಮ ಜಾರಿಗೊಳಿಸಲುಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (‍ಪಿಐಎಲ್‌) ವಿಚಾರಣೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಅಭಯ್‌ ಎಸ್. ಓಕಾ ಅವರಿದ್ದ ಪೀಠವು, ಇದನ್ನು ಕಾನೂನು ಆಯೋಗಕ್ಕೆ ಶಿಫಾರಸು ಮಾಡುವಂತೆ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಪಿಐಎಲ್‌ನಲ್ಲಿಸಲ್ಲಿಸಿದ್ದ ಕೋರಿಕೆಯನ್ನೂ ತಿರಸ್ಕರಿಸಿತು.

‘ಈ ಸಾಮಾಜಿಕ ಸಮಸ್ಯೆಯನ್ನು ಸರ್ಕಾರ ನೋಡಿಕೊಳ್ಳಲಿದೆ. ಆದಾಗ್ಯೂ, ದೇಶದಲ್ಲಿ ಜನಸಂಖ್ಯೆ ಬೆಳವಣಿಗೆ ಇಳಿಮುಖದಲ್ಲಿದೆ. ಅಷ್ಟಕ್ಕೂ ನ್ಯಾಯಾಲಯ ಹಸ್ತಕ್ಷೇಪ ಮಾಡುವಂತಹ ಸಮಸ್ಯೆ ಇದಲ್ಲ. ನಮಗೆ ಮಾಡಲು ಇದಕ್ಕಿಂತಲೂ ಅತ್ಯುತ್ತಮ ಕೆಲಸಗಳು ಬಾಕಿ ಇವೆ’ ಎಂದು ಪೀಠ ಮೌಖಿಕವಾಗಿ ಹೇಳಿದೆ.

ADVERTISEMENT

‘ನಿಮಗೆ ಪ್ರಚಾರ ಬೇಕಾಗಿದೆ. ಪ್ರಚಾರ ಕೊಡುವುದು ನಮ್ಮ ಕೆಲಸವಲ್ಲ. ಈ ಅರ್ಜಿಯನ್ನು ನಾವು ಮುಂದುವರಿಸುವುದಿಲ್ಲ’ ಎಂದು ಪೀಠವು, ಅರ್ಜಿದಾರರಿಗೆ ಖಡಕ್ಕಾಗಿ ಹೇಳಿತು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಜನಸಂಖ್ಯೆ ಏರಿಕೆ ನಿಯಂತ್ರಿಸಲು ನಾವು ಏನೆಲ್ಲಾ ಮಾಡಬಹುದು ಅದೆಲ್ಲವನ್ನೂ ಮಾಡುತ್ತಿದ್ದೇವೆ’ ಎಂದು ಪೀಠಕ್ಕೆ ತಿಳಿಸಿದರು.

ದೆಹಲಿ ಹೈಕೋರ್ಟ್‌ ತೀರ್ಪು ಅನ್ನೂ ಪಿಐಎಲ್‌ನಲ್ಲಿ ಪ್ರಶ್ನಿಸಿದ್ದ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರ ವಾದವನ್ನು ಪೀಠವು ಪುರಸ್ಕರಿಸಲಿಲ್ಲ. ಈ ವಿಷಯದಲ್ಲಿ ಯಾವುದೇ ಆದೇಶ ಅಥವಾ ತೀರ್ಪನ್ನು ಹೊರಡಿಸುವುದಿಲ್ಲವೆಂದು ಪೀಠ ಹೇಳಿತು.ಆಗ ಅಶ್ವಿನಿ ಕುಮಾರ್‌ ಅರ್ಜಿ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.