ADVERTISEMENT

ಹೆಚ್ಚಿನ ಕಾಲಾವಕಾಶ ಕೋರಿದ್ದ ವಿಮಾ ಕಂಪನಿಗಳ ಅರ್ಜಿ ವಜಾಗೊಳಿಸಿದ ಸುಪ್ರೀಂ

ರಸ್ತೆ ಅಪಘಾತ ಪ್ರಕರಣಗಳ ಇತ್ಯರ್ಥಕ್ಕೆ ಆ್ಯಪ್‌ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 14:43 IST
Last Updated 21 ನವೆಂಬರ್ 2021, 14:43 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ರಸ್ತೆ ಅಪಘಾತ, ಮೋಟಾರು ವಾಹನಗಳ ಅಪಘಾತದಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ನ್ಯಾಯಮಂಡಳಿಗಳಲ್ಲಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅನುಕೂಲವಾಗುವಂತೆ ಅಖಿಲ ಭಾರತ ಮಟ್ಟದಲ್ಲಿ ಮೊಬೈಲ್‌ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಕಾಲಾವಕಾಶ ಕೋರಿದ್ದ ವಿಮಾ ಕಂಪನಿಗಳ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

‘ವಿಮಾ ಕಂಪನಿಗಳ ಈ ನಡೆಯನ್ನು ನಾವು ಪ್ರಶಂಸಿಸುವುದಿಲ್ಲ. ನ್ಯಾಯಾಲಯದ ನಿರ್ದೇಶನದಿಂದ ವಿಮಾ ಕಂಪನಿಗಳು ಹೊರಗುಳಿಯಲು ಸಾಧ್ಯವಿಲ್ಲ. ವಿಮಾ ಕಂಪನಿಗಳು ಈ ಆ್ಯಪ್‌ ತಯಾರಿಸಲು ಸಮರ್ಥರಾಗಿರದಿದ್ದರೆ ನಾವು ಸರ್ಕಾರಕ್ಕೆ ಸೂಚನೆ ನೀಡುತ್ತೇವೆ’ ಎಂದು ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ಪೀಠ ಹೇಳಿದೆ.

ಆ್ಯಪ್‌ ತಯಾರಿಕೆಗೆ ಸುಪ್ರೀಂಕೋರ್ಟ್‌ ವಿಮಾ ಕಂಪನಿಗಳಿಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ.

ADVERTISEMENT

ಉದ್ದೇಶಿತ ಆ್ಯಪ್‌ ಅಭಿವೃದ್ಧಿಯಿಂದ ಭಾರತದಾದ್ಯಂತ ರಸ್ತೆ ಅಪಘಾತಗಳು, ನ್ಯಾಯಮಂಡಳಿಗಳು, ಪೊಲೀಸ್‌ ಮತ್ತು ವಿಮಾ ಕಂಪನಿಗಳ ಸಂತ್ರಸ್ತರು ಪರಿಹಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ 2021ರ ಮಾರ್ಚ್‌ 16 ಮತ್ತು ಆಗಸ್ಟ್‌ 3 ರಂದು ಸುಪ್ರೀಂಕೋರ್ಟ್‌ ವಿಸ್ತೃತ ಆದೇಶವನ್ನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.