ADVERTISEMENT

ಸಾವರ್ಕರ್ ಹೆಸರು ದುರ್ಬಳಕೆ: ಅರ್ಜಿ ವಿಚಾರಣೆಗೆ ನಕಾರ

ಪಿಟಿಐ
Published 27 ಮೇ 2025, 9:31 IST
Last Updated 27 ಮೇ 2025, 9:31 IST
   

ನವದೆಹಲಿ: ವಿನಾಯಕ ದಾಮೋದರ ಸಾವರ್ಕರ್ ಅವರ ಕುರಿತಾಗಿ ಕೆಲವು ‘ಸಂಗತಿಗಳನ್ನು ಸಾಬೀತು ಮಾಡಲು’ ನಿರ್ದೇಶನ ನೀಡಬೇಕು, ಅವರ ಹೆಸರಿನ ದುರ್ಬಳಕೆ ತಡೆಯಬೇಕು ಎಂಬ ಕೋರಿಕೆ ಇರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ತಾವು ಸಲ್ಲಿಸಿದ್ದ ಅರ್ಜಿಯ ಪರವಾಗಿ ತಾವೇ ವಾದ ಮಂಡಿಸಲು ಅರ್ಜಿದಾರ ಪಂಕಜ್ ಫಡ್ನಿಸ್ ಬಂದಿದ್ದರು. ತಾವು ಹಲವು ವರ್ಷಗಳಿಂದ ಸಾವರ್ಕರ್ ಬಗ್ಗೆ ಸಂಶೋಧನೆ ನಡೆಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಈ ಅರ್ಜಿಯು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್‌ ಮಸೀಹ್ ಅವರು ಇರುವ ವಿಭಾಗೀಯ ಪೀಠದ ಮುಂದೆ ಬಂದಿತ್ತು.

ಲಾಂಛನ ಮತ್ತು ಹೆಸರುಗಳ (ಅಸಮರ್ಪಕ ಬಳಕೆ ತಡೆ) ಕಾಯ್ದೆ–1956ರ ಪರಿಚ್ಛೇದದಲ್ಲಿ ಸಾವರ್ಕರ್ ಅವರ ಹೆಸರನ್ನು ಸೇರಿಸಬೇಕು ಎಂಬ ಕೋರಿಕೆಯನ್ನೂ ಈ ಅರ್ಜಿಯ ಹೊಂದಿತ್ತು. ಅರ್ಜಿದಾರರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗಿಲ್ಲ, ಹೀಗಿರುವಾಗ ಅರ್ಜಿಯ ವಿಚಾರವಾಗಿ ಮಧ್ಯಪ್ರವೇಶ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಪೀಠವು ಹೇಳಿತು.

ADVERTISEMENT

ಸಾವರ್ಕರ್ ಅವರ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೂಲಭೂತ ಕರ್ತವ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಫಡ್ನಿಸ್ ದೂರಿದ್ದರು.

‘ಇಲ್ಲಿ ನಿಮ್ಮ ಯಾವ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ? ಅರ್ಜಿಯನ್ನು ನಾವು ಪರಿಗಣಿಸಲು ಆಗುವುದಿಲ್ಲ’ ಎಂದು ಪೀಠವು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.