ನವದೆಹಲಿ: ಯೂಟ್ಯೂಬ್ ಚಾನೆಲ್ ‘4–ಪಿಎಂ’ ನಿರ್ಬಂಧ ಹೇರಿದನ್ನು ತೆರವುಗೊಳಿಸುವಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ.
‘ಪತ್ರಿಕೋದ್ಯಮ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಮಾಹಿತಿ ಪಡೆಯುವುದರ ಮೇಲೆ ದಾಳಿ’ ನಡೆಸಲಾಗಿದೆ ಎಂದು ಆರೋಪಿಸಿ ‘4–ಪಿಎಂ’ ಯೂಟ್ಯೂಬ್ ಚಾನೆಲ್‌ನ ಸಂಪಾದಕ ಸಂಜಯ್ ಶರ್ಮಾ ಅವರು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘ಯೂಟ್ಯೂಬ್ ಚಾನೆಲ್ ಮೇಲೆ ನಿರ್ಬಂಧ ಹೇರುವ ಮುನ್ನ ಯಾವುದೇ ನೋಟಿಸ್ ನೀಡಿಲ್ಲ. ಮೇಲ್ನೋಟಕ್ಕೆ ಇದು ಸಂವಿಧಾನಬಾಹಿರ’ ಎಂದು ನ್ಯಾಯಾಲಯದ ಗಮನಸೆಳೆದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಕೆ.ವಿ. ವಿಶ್ವನಾಥನ್ ನೇತೃತ್ವದ ನ್ಯಾಯಪೀಠವು, ಈ ಸಂಬಂಧ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿ, ಅರ್ಜಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.