ಸುಪ್ರೀಂ ಕೋರ್ಟ್
ನವದೆಹಲಿ: ಪ್ರಕರಣವೊಂದರ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ‘ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸುವುದನ್ನು ರೂಢಿಯಾಗಿಸಬಾರದು’ ಎಂದು ಹೇಳಿದೆ.
‘ತನಿಖೆಯನ್ನು ಸಿಬಿಐಗೆ ವಹಿಸಬೇಕಾದ ಅಗತ್ಯವಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೆ ಮಾತ್ರವೇ ಅಂತಹ ಪ್ರಕರಣಗಳನ್ನು ಹೈಕೋರ್ಟ್‌ಗಳು ಸಿಬಿಐಗೆ ವರ್ಗಾಯಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧೂಲಿಯಾ ಹಾಗೂ ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠ ತಿಳಿಸಿದೆ.
2024ರ ಮೇ ತಿಂಗಳಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿದೆ.
ಗುಪ್ತಚರ ಸಂಸ್ಥೆಯ ಐಜಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ₹1.49 ಕೋಟಿ ವರ್ಗಾಯಿಸುವಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇರೆಗೆ ಪಂಚಕುಲದಲ್ಲಿ 2022ರ ಅಕ್ಟೋಬರ್‌ನಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ರಾಜ್ಯ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಕೋರಿ ದೂರುದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಅವರ ಮನವಿಯನ್ನು ಹೈಕೋರ್ಟ್ ಅಂಗೀಕರಿಸಿದ ಕಾರಣ ಆರೋಪಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಜನರ ಹಕ್ಕುಗಳ ಬಗ್ಗೆಯೂ ಯೋಚಿಸಿ: ‘ಸುಪ್ರೀಂ’
ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ಜನರ ಮೂಲಭೂತ ಹಕ್ಕುಗಳ ಬಗ್ಗೆಯೂ ಯೋಚಿಸಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ನಾಗರಿಕ ಆಹಾರ ಪೂರೈಕೆ ನಿಗಮ (ಎನ್‌ಎಎನ್) ಹಗರಣ ಪ್ರಕರಣವನ್ನು ಛತ್ತೀಸಗಢದಿಂದ ನವದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿದ್ದ ಇ.ಡಿಯನ್ನು ತರಾಟೆಗೆ ತೆಗೆದುಕೊಂಡಿತು. ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠವು ಸಂವಿಧಾನದ 32ನೇ ವಿಧಿಯಡಿಯಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಹೇಗೆ ಎಂದು ಇ.ಡಿಯನ್ನು ಪ್ರಶ್ನಿಸಿತು. ಜನರು ತಮ್ಮ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಭಾವಿಸಿದರೆ ನೇರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಈ ವಿಧಿಯು ಅವಕಾಶ ನೀಡುತ್ತದೆ. ಬಳಿಕ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ‘ಇ.ಡಿ ಕೂಡಾ ಮೂಲಭೂತ ಹಕ್ಕು ಹೊಂದಿದೆ’ ಎಂದು ಹೇಳಿ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು. ಆಗ ಪೀಠವು ‘ಇ.ಡಿ ಮೂಲಭೂತ ಹಕ್ಕು ಹೊಂದಿದ್ದರೆ ಜನರ ಮೂಲಭೂತ ಹಕ್ಕುಗಳ ಬಗ್ಗೆಯೂ ಅದು ಚಿಂತಿಸಬೇಕು’ ಎಂದು ಹೇಳಿತು. ನಂತರ ಅರ್ಜಿ ಹಿಂಪಡೆಯಲು ಅವಕಾಶ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.