ADVERTISEMENT

ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ: ಮಧ್ಯಂತರ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2023, 15:23 IST
Last Updated 7 ಜುಲೈ 2023, 15:23 IST
ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್‌ ಕಡ್ಡಾಯ: ಸುಪ್ರೀಂ ಕೋರ್ಟ್‌ ಆದೇಶ
ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್‌ ಕಡ್ಡಾಯ: ಸುಪ್ರೀಂ ಕೋರ್ಟ್‌ ಆದೇಶ   

ನವದೆಹಲಿ: ಇದೇ ವರ್ಷದ ಆಗಸ್ಟ್‌ ಅಂತ್ಯದೊಳಗೆ 32 ಸಾವಿರ ಶಿಕ್ಷಕರ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ನಡೆಸುವಂತೆ ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿಗೆ ನಿರ್ದೇಶನ ನೀಡಿದ್ದ ಕಲ್ಕತ್ತಾ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. 

ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ಕೆ.ವಿ. ವಿಶ್ವನಾಥನ್‌ ಅವರಿದ್ದ ಪೀಠವು, ‘ಉದ್ಯೋಗಕ್ಕಾಗಿ ಲಂಚ’ ಹಗರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಆದಷ್ಟು ಶೀಘ್ರ ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ಸೂಚನೆ ಕೊಟ್ಟಿದೆ. 

ಹೈಕೋರ್ಟ್‌ ವಿಧಿಸಿರುವ ಕಾಲಮಿತಿಯೊಳಗೆ ನೇಮಕಾತಿ  ಪ್ರಕ್ರಿಯೆಯನ್ನು ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಮಂಡಳಿ ಪರವಾಗಿ ವಕೀಲರು ಮಾಡಿದ ವಾದವನ್ನು ಪೀಠವು ಮಾನ್ಯ ಮಾಡಿದೆ.  

ADVERTISEMENT

ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಎ.ಎಂ.ಸಿಂಘ್ವಿ, ಶ್ಯಾಮ್ ದಿವಾನ್ ಮತ್ತು ಕಲ್ಯಾಣ್ ಬಂಡೋಪಾಧ್ಯಾಯ ಅವರ ಮವಿ ಆಲಿಸಿದ ನಂತರ ಪೀಠವು, ‘ಇದು ಹೆಚ್ಚಿನ ಸಂಖ್ಯೆಯ ಸಹ ಶಿಕ್ಷಕರ ಆಯ್ಕೆ ಮತ್ತು ನೇಮಕಾತಿಗೆ ಸಂಬಂಧಿಸಿದ ವಿಷಯವೆಂದು ನಂಬಿದ್ದೇವೆ. ಈ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು. ಆದ್ದರಿಂದ, ಮೇಲ್ಮನವಿಯನ್ನು ತ್ವರಿತ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ವಿನಂತಿಸುತ್ತೇವೆ’ ಎಂದು ಹೇಳಿತು.

ಹೈಕೋರ್ಟ್‌ ಏಕ ಸದಸ್ಯ ಪೀಠವು ಶಿಕ್ಷಕರ ನೇಮಕಾತಿ ವಜಾಗೊಳಿಸಿ ನೀಡಿರುವ ತೀರ್ಪಿಗೆ ವಿಭಾಗೀಯ ಪೀಠ ತಡೆ ನೀಡಿ, ಹೊಸದಾಗಿ ನೇಮಕಾತಿ ನಡೆಸುವ ನಿರ್ದೇಶನ ಸಮರ್ಥನೀಯವಲ್ಲವೆಂದು ಅಭಿಪ್ರಾಯಪಟ್ಟಿರುವುದನ್ನು ಪ್ರಾಥಮಿಕ ಶಿಕ್ಷಣ ಮಂಡಳಿಯ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.  

ಹೈಕೋರ್ಟ್‌ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಅವರಿದ್ದ ಏಕ ಸದಸ್ಯ ಪೀಠವು ಶಿಕ್ಷಕರ ನೇಮಕಾತಿ ವಜಾಗೊಳಿಸಿ, ಮೂರು ತಿಂಗಳೊಳಗೆ ಹೊಸದಾಗಿ ಆಯ್ಕೆ ನಡೆಸುವಂತೆ ಆದೇಶಿಸಿತ್ತು.

‘ಉದ್ಯೋಗಗಳನ್ನು ಸರಕುಗಳಂತೆ ಮಾರಾಟ ಮಾಡಲಾಗಿದೆ’ ಮತ್ತು ಈ ಪ್ರಮಾಣದ ಭ್ರಷ್ಟಾಚಾರ ಪಶ್ಚಿಮ ಬಂಗಾಳದಲ್ಲಿ ಎಂದಿಗೂ ನಡೆದಿರಲಿಲ್ಲ. ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಗೆ ಹಾಜರಾಗದೇ ಹುದ್ದೆಗಳಿಗೆ ನೇಮಕಾತಿಯಾಗಿದ್ದಾರೆ ಎಂದು ಹೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.