ADVERTISEMENT

ಮತದಾರರ ಅರ್ಜಿಯಲ್ಲಿ ಆಧಾರ್ ಅಂಶ ತೆಗೆಯದ ಅಧಿಕಾರಿ ವಿರುದ್ಧ ಕ್ರಮಕ್ಕೆ ಒಪ್ಪದ SC

ಪಿಟಿಐ
Published 9 ಫೆಬ್ರುವರಿ 2024, 14:41 IST
Last Updated 9 ಫೆಬ್ರುವರಿ 2024, 14:41 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಮತ್ತು ಇರುವ ಮತದಾರರ ಮಾಹಿತಿ ಬದಲಾವಣೆಗೆ ಅಗತ್ಯವಿರುವ ಅರ್ಜಿಯಲ್ಲಿನ ಆಧಾರ್ ಸಂಖ್ಯೆ ನಮೂದಿಸುವ ಅಂಶವನ್ನು ಬದಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಮತದಾರರ ಗುರುತಿನ ಚೀಟಿಗಾಗಿ ಸಲ್ಲಿಸುವ ಅರ್ಜಿಯಲ್ಲಿ ಒಂದಷ್ಟು ಬದಲಾವಣೆ ಮಾಡಿದ್ದು, ಆಧಾರ್ ಸಂಖ್ಯೆ ನಮೂದಿಸುವುದು ಐಚ್ಛಿಕ ಎಂದು ಹೇಳಲಾಗಿದೆ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು.

ADVERTISEMENT

ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ಸೇರಿರುವುದನ್ನು ತಡೆಯುವ ದೃಷ್ಟಿಯಿಂದ ಆಧಾರ್ ಜೋಡಣೆಯ ಹೊಸ ವ್ಯವಸ್ಥೆಯನ್ನು ಚುನಾವಣಾ ಆಯೋಗ ಜಾರಿಗೆ ತಂದಿತು.

ಮತದಾರರ ಗುರುತಿನ ನೋಂದಣಿಗಾಗಿ ಇರುವ ಕಾಯ್ದೆಗೆ 2022ರಲ್ಲಿ ತಂದ ತಿದ್ದುಪಡಿ ಅನ್ವಯ, ಮತದಾರರ ಗುರುತಿನ ಚೀಟಿಯಲ್ಲಿ ದಾಖಲಾಗಿರುವ ಪ್ರತಿಯೊಬ್ಬ ಮತದಾರನೂ ಅರ್ಜಿ ನಮೂನೆ 6ಬಿ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬಹುದು. 26ಬಿ ಅಡಿಯಲ್ಲಿ ಆಧಾರ್ ಜೋಡಣೆ ಕಡ್ಡಾಯವಲ್ಲ. ಹೀಗಾಗಿ ಚುನಾವಣಾ ಆಯೋಗವು ತನ್ನ ಅರ್ಜಿ ನಮೂನೆಯಲ್ಲಿ ಅಗತ್ಯ ತಿದ್ದುಪಡಿ ಮಾಡಿಕೊಳ್ಳಲು ಸೂಚಿಸಬೇಕು. ಜತೆಗೆ ಈ ತಿದ್ದುಪಡಿ ಮಾಡಿಕೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು  ಕೋರಿದ್ದರು. ಅರ್ಜಿಯಲ್ಲಿ ವಿವರಣಾತ್ಮಕ ಬದಲಾವಣೆ ತರಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಇದೇ ಪೀಠ ವಜಾಗೊಳಿಸಿತು. 

ಸೆಪ್ಟೆಂಬರ್‌ನಿಂದ ಅರ್ಜಿ ನಮೂನೆಯಲ್ಲಿ ಅಗತ್ಯ ತಿದ್ದುಪಡಿ ಮಾಡದ ಚುನಾವಣಾ ಆಯೋಗದ ಮೂವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿರಿಯ ಉಪಾಧ್ಯಕ್ಷ ಜಿ.ನಿರಂಜನ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ, ‘ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯಿಸಲು ಸುಪ್ರೀಂ ಕೋರ್ಟ್ ಕಾಲಮಿತಿಯನ್ನು ಹೇರಿಲ್ಲ. ಆದಾಗ್ಯೂ, ಚುನಾವಣೆ ಸಮೀಪದಲ್ಲೇ ಇರುವುದರಿಂದ ಆಯೋಗಕ್ಕೆ ಸಾಕಷ್ಟು ಕೆಲಸಗಳಿವೆ’ ಎಂದು ಅಭಿಪ್ರಾಯಪಟ್ಟರು.

ಚುನಾವಣಾ ಆಯೋಗವು ಈಗಾಗಲೇ 66 ಕೋಟಿ ಮತದಾರರ ಹೆಸರಿಗೆ ಆಧಾರ್ ಜೋಡಣೆಯಾಗಿದೆ ಎಂದು ಪೀಠಕ್ಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.