ADVERTISEMENT

ಜೋಶಿಮಠ ಸೇರಿ ಉತ್ತರಾಖಂಡದಲ್ಲಿ ಭಾರಿ ಭೂಕಂಪ ಸಾಧ್ಯತೆ: ಎನ್‌ಜಿಆರ್‌ಐ ವಿಜ್ಞಾನಿಗಳು

ಪ್ರಸಾದ್ ನಿಚ್ಚೆನಮೆಟ್ಲ
Published 8 ಫೆಬ್ರುವರಿ 2023, 10:38 IST
Last Updated 8 ಫೆಬ್ರುವರಿ 2023, 10:38 IST
   

ನವದೆಹಲಿ: ಇತ್ತೀಚೆಗೆ ಭೂಕುಸಿತ ಸಂಭವಿಸಿದ್ದ ಜೋಶಿಮಠ ಸೇರಿದಂತೆ ಉತ್ತರಾಖಂಡ ರಾಜ್ಯದ ಹಲವೆಡೆ ಭವಿಷ್ಯದಲ್ಲಿ ಭಾರಿ ಭೂಕಂಪ ಸಂಭವಿಸಲಿದೆ ಎಂದು ಹೈದರಾಬಾದ್ ಮೂಲದ ಸಿಎಸ್‌ಐಆರ್‌–ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ(ಎನ್‌ಜಿಆರ್‌ಐ) ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಉತ್ತರಾಖಂಡವನ್ನು ಭೂಕಂಪ ವಲಯ ಎಂದು ಗುರುತಿಸಲಾಗಿದ್ದು, 9,000ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ಟರ್ಕಿ–ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲೇ ಈ ಎಚ್ಚರಿಕೆ ಬಂದಿದೆ.

‘ಉತ್ತರಾಖಂಡವು ಭೂಕಂಪನ ವಲಯದಲ್ಲಿ ಬರಲಿದ್ದು, ದೊಡ್ಡ ಭೂಕಂಪ ಸಂಭವಿಸುವ ಸಾಧ್ಯತೆ ಇದೆ’ಎಂದು ಎನ್‌ಜಿಆರ್‌ಐನ ಭೂಕಂಪಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿ ಡಾ. ಪೂರ್ಣಚಂದ್ರ ರಾವ್ ಹೇಳಿದ್ದಾರೆ.

ADVERTISEMENT

1905ರಲ್ಲಿ ರಿಕ್ಟರ್ ಮಾಪಕದಲ್ಲಿ 8ಕ್ಕೂ ಅಧಿಕ ತೀವ್ರತೆಯ ಭೂಕಂಪ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಸಂಭವಿಸಿತ್ತು. 1943ರಲ್ಲಿ ಬಿಹಾರ–ನೇಪಾಳ ಗಡಿಯಲ್ಲೂ ಕಂಪನದ ಅನುಭವವಾಗಿತ್ತು. ಆದರೆ, ಶತಮಾನದಿಂದ ಉತ್ತರಾಖಂಡದಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ.

‘ಹಲವು ಅಧ್ಯಯನಗಳು, ಲೆಕ್ಕಾಚಾರಗಳು, ಹಿಮಾಚಲ ಮತ್ತು ನೇಪಾಳ ಸಮೀಪದ ಪ್ರದೇಶದಲ್ಲಿ ದೊಡ್ಡ ಭೂಕಂಪದ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿವೆ. ಅಂದರೆ, ಇಡೀ ಉತ್ತರಾಖಂಡ ಇದೇ ಪ್ರದೇಶದಲ್ಲಿ ಬರುತ್ತದೆ. ಆದರೆ, ಇಲ್ಲಿ ಒಂದು ಶತಮಾನ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ಯಾವುದೇ ದೊಡ್ಡ ಅಡಚಣೆ ಸಂಭವಿಸಿಲ್ಲ’ಎಂದು ರಾವ್ ಹೇಳಿದ್ದಾರೆ.

‘ಹಿಮಾಲಯದಲ್ಲಿ ಟೆಕ್ಟೋನಿಕ್ ಪ್ಲೇಟ್ ಚಲನೆಯಿಂದಾಗಿ ಉಂಟಾಗಿರುವ ಒತ್ತಡ ಬಿಡುಗಡೆ ಆಗಬೇಕಿದೆ. ಯಾವುದೇ ಸಂದರ್ಭದಲ್ಲಿ ಅದು ಭೂಕಂಪನದ ರೂಪದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ, ಅದು ಯಾವಾಗ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ’ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಭೂಕುಸಿತ ಸಂಭವಿಸಿದ್ದ ಜೋಶಿಮಠದ ಕುರಿತಂತೆಯೂ ಎನ್‌ಜಿಆರ್‌ಐ ಮೇಲ್ವಿಚಾರಣೆ ಮಾಡುತ್ತಿದೆ.

‘ನಾವು ಜೋಶಿಮಠದಲ್ಲಿ ಭೂಕಂಪನಗ್ರಾಹಕಗಳು ಮತ್ತು ಇನ್ಫ್ರಾ-ಸೌಂಡ್ ಉಪಕರಣವನ್ನು ಅಳವಡಿಸಿದ್ದೇವೆ. ಇದರಿಂದ ಟೆಕ್ಟೋನಿಕ್ ಚಲನೆಯನ್ನು ಅಳೆಯಲು, ಭೂಕುಸಿತವನ್ನು ಮೇಲ್ವಿಚಾರಣೆ ಮಾಡಲು ಬೇಕಾದ ನೈಜ ಸಮಯದ ಡೇಟಾ ಸಿಗುತ್ತದೆ. ಜೋಶಿಮಠದ ಭೂಕಂಪನ ಸಂಕೇತಗಳಲ್ಲಿ ಕೆಲವು ವ್ಯತ್ಯಾಸಗಳನ್ನು ನಾವು ಗಮನಿಸಿದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ನಾವು ಇನ್ನೂ ಕೆಲ ಮಾಹಿತಿಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಬೇಕಾಗಿದೆ’ಎಂದು ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.