ADVERTISEMENT

ಮಧ್ಯಪ್ರದೇಶದಲ್ಲಿ ಮರುಕಳಿಸಿದ ಇತಿಹಾಸ: ಅಜ್ಜಿಯ ನಡೆ ಅನುಸರಿಸಿದ ಜೋತಿರಾದಿತ್ಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 7:23 IST
Last Updated 12 ಮಾರ್ಚ್ 2020, 7:23 IST
   

ಭೋಪಾಲ: ಮಧ್ಯಪ್ರದೇಶದ ಪ್ರಭಾವಿ ನಾಯಕ, ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ ತೊರೆಯುವುದರೊಂದಿಗೆ ಅಲ್ಲಿನ ಕೈ ಸರ್ಕಾರ ಡೋಲಾಯಮಾನ ಪರಿಸ್ಥಿತಿಗೆ ಸಲುಕಿದೆ. ಇದೇ ಸಿಂಧಿಯಾ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸಿದ್ದ ಇಂಥದ್ದೇ ಪ್ರಸಂಗ ಇತಿಹಾಸದಲ್ಲಿದೆ.

ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರೂ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಗ್ವಾಲಿಯರ್‌ನ ರಾಜ ಮನೆತನದ ರಾಜಮಾತೆ ವಿಜಯಾ ರಾಜೇ ಸಿಂಧಿಯಾ ಅವರು, 1957ರಲ್ಲಿ ಕಾಂಗ್ರೆಸ್‌ ಮೂಲಕ ರಾಜಕೀಯ ಆರಂಭಿಸಿದ್ದರು. ಆದರೆ, 1967ರಲ್ಲಿ ಅವರು ಕಾಂಗ್ರೆಸ್‌ ತೊರೆದಿದ್ದರು. ‌

1962ರಲ್ಲಿ ಎದುರಾಗಿದ್ದ ಲೋಕಸಭೆ ಚುನಾವಣೆಗೆ ತಮ್ಮದೇ ಪ್ರತ್ಯೇಕ ಅಭ್ಯರ್ಥಿಗಳ ಪಟ್ಟಿಯೊಂದಿಗೆ ರಾಜಮಾತೆ ವಿಜಯಾ ರಾಜೇ ಸಿಂಧಿಯಾ ಅವರು ಮುಖ್ಯಮಂತ್ರಿ ಡಿ.ಪಿ ಮಿಶ್ರಾ ಅವರನ್ನು ಭೇಟಿಯಾಗಲು ತೆರಳಿದ್ದರು. ಆದರೆ, ವಿಜಯಾ ರಾಜೇ ಸಿಂಧಿಯಾ ಅವರನ್ನು ಸಿಎಂ ಡಿಪಿ ಮಿಶ್ರಾ ಅವರು ಬರೋಬ್ಬರಿ 2 ಗಂಟೆಗಳ ಕಾಲ ಕಾಯುವಂತೆ ಮಾಡಿದ್ದರು. ಇದರಿಂದ ಕೋಪೋದ್ರಿಕ್ತರಾದ ವಿಜಯಾ ರಾಜೇ ಸಿಂಧಿಯಾ ಅವರು ಕಾಂಗ್ರೆಸ್‌ ತೊರೆಯಲು ನಿರ್ಧರಿಸಿದ್ದರು.

ADVERTISEMENT

ಅದರಂತೆ 36 ಶಾಸಕರನ್ನು ಗ್ವಾಲಿಯರ್‌ನ ಉಷಾ ಕಿರಣ್‌ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿಟ್ಟ ವಿಜಯಾ ರಾಜೇ ಸಿಂಧಿಯಾ ಅವರು, ಎಲ್ಲರನ್ನೂ ಕಾಂಗ್ರೆಸ್‌ನಿಂದ ಹೊರಬರುವಂತೆ ಮಾಡಿದ್ದರು. ‌ಅದರೊಂದಿಗೆ ಮಧ್ಯಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ ಡಿ.ಪಿ ಮಿಶ್ರಾ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ವಿಜಯಾ ರಾಜೇ ಸಿಂಧಿಯಾ ಅವರು ಉರುಳಿಸಿದ್ದರು. ‌

ಕಾಂಗ್ರೆಸ್‌ ತೊರೆದ ನಂತರ ವಿಜಯಾ ರಾಜೇ ಸಿಂಧಿಯಾ ಅವರು 1967ರಲ್ಲಿ ಗುನಾ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಅವರು ಭಾರತೀಯ ಜನಸಂಘ ಸೇರಿದ್ದರು. ಮಧ್ಯಪ್ರದೇಶ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಸಂಸತ್‌ ಸ್ಥಾನಕ್ಕೂ ಅವರು ರಾಜೀನಾಮೆ ನೀಡಿದ್ದರು.

ಸದ್ಯ ಅವರ ಮೊಮ್ಮಗ ಜೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ ತೊರೆದಿದ್ದಾರೆ.53 ವರ್ಷಗಳ ಹಿಂದೆ ತಮ್ಮ ಅಜ್ಜಿ ಇಟ್ಟ ಹೆಜ್ಜೆಗಳನ್ನೇ ಅನುಸರಿಸಿರುವ ಜೋತಿರಾದಿತ್ಯ,ಕಮಲನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಅಳಿವಿನ ಅಂಚಿಗೆ ತಳ್ಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.