ಇಂಫಾಲ: ಥಾಂಗ್ಜಿಂಗ್ ಬೆಟ್ಟಕ್ಕೆ ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳಲು ಮೈತೇಯಿ ಸಮುದಾಯದವರು ಮೊಯಿರಾಂಗ್‌ನಲ್ಲಿ ಬೀಡುಬಿಟ್ಟಿದ್ದಾರೆ. ಈ ಹಿನ್ನೆಲೆ ಮಣಿಪುರದ ಬಿಷ್ಣುಪುರ ಮತ್ತು ಚುರಾಚಾಂದಪುರ ಜಿಲ್ಲೆಗಳಲ್ಲಿ ಸೋಮವಾರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಥಾಂಗ್ಜಿಂಗ್ ಅನ್ನು ಮೈತೇಯಿ ಸಮುದಾಯದವರು ತಮ್ಮ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ಆದರೆ ಬೆಟ್ಟ ಹತ್ತದಂತೆ ಕುಕಿ–ಜೋ ಸಂಘಟನೆಗಳು ಮೈತೇಯಿ ಸಮುದಾಯಕ್ಕೆ ಎಚ್ಚರಿಕೆ ನೀಡಿವೆ.
ಥಾಂಗ್ಜಿಂಗ್‌ಗೆ ತೆರಳಲು ಬಿಷ್ಣುಪುರ ಜಿಲ್ಲೆಯ ಕ್ವಾಕ್ಟಾ ಮತ್ತು ಫೌಗಕ್‌ಚೈ ಇಖೈ ಮೂಲಕ ಹಾದು ಹೋಗಬೇಕು. ಹಾಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈತೇಯಿ ಸಮುದಾಯದವರು ಸಾಂಪ್ರದಾಯಿಕವಾಗಿ ಏಪ್ರಿಲ್‌ನಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಭಾನುವಾರ, ಇಂಫಾಲ್ ಕಣಿವೆಯ ವಿವಿಧ ಭಾಗಗಳಿಂದ ಬಂದ ಅನೇಕ ಮೈತೇಯಿ ಸಮುದಾಯದ ಯಾತ್ರಿಕರು ಬಿಷ್ಣುಪುರದ ಥಾಂಗ್ಜಿಂಗ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಾತ್ರಿಯಿಡಿ ಮೊಯಿರಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಗಿದ್ದಾರೆ. ಮುಂದಿನ ದಿನಗಳಲ್ಲಿ ಥಾಂಗ್ಜಿಂಗ್ ತೀರ್ಥಯಾತ್ರೆಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳುವುದನ್ನು ತಡೆಯಲು ಕುಕಿ-ಜೊ ಸಮುದಾಯದ ನೂರಾರು ಸದಸ್ಯರು ಭಾನುವಾರ ಥಾಂಗ್ಜಿಂಗ್ ಬೆಟ್ಟದಲ್ಲಿ ಜಮಾಯಿಸಿದ್ದು, ಧರಣಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಮೈತೇಯಿಗಳು ಪವಿತ್ರ ಬೆಟ್ಟ ಏರುವ ಪ್ರಯತ್ನ ನಡೆಸಿದರೆ, ಅದನ್ನು ನಮಗೊಡ್ಡುವ ನೇರ ಸವಾಲು ಎಂದೇ ಪರಿಗಣಿಸಲಾಗುವುದು. ನಮ್ಮೆಲ್ಲ ಶಕ್ತಿ ಬಳಸಿ ತಡೆಯುತ್ತೇವೆ’ ಎಂದು ಆರು ಕುಕಿ– ಜೋ ಗುಂಪುಗಳು ಶನಿವಾರ ಪ್ರಕಟಣೆಯಲ್ಲಿ ತಿಳಿಸಿವೆ.
'ಕಾನೂನಿನ ನಿಯಮ ಮೇಲುಗೈ ಸಾಧಿಸಬೇಕು. ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು' ಎಂದು ಮೈತೇಯಿ ಹೆರಿಟೇಜ್ ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಿದೆ.
‘ಥಾಂಗ್ಜಿಂಗ್ ಬೆಟ್ಟ ಹತ್ತದಂತೆ ಮೈತೇಯಿಗಳಿಗೆ ಬೆದರಿಕೆ ಹಾಕುವುದು ಸಂವಿಧಾನಬಾಹಿರ ಮತ್ತು ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆಚರಣೆಗಳ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ‘ ಎಂದೂ ಸೊಸೈಟಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.