
ಲಖನೌ: ಕಾಂಗ್ರೆಸ್ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂಬ ವರದಿಗಳ ನಡುವೆಯೇ ಮಂದಿರಕ್ಕೆ ರಾಹುಲ್ ಭೇಟಿ ನೀಡಬಾರದು ಎಂದು ಸನ್ಯಾಸಿಗಳ ಗುಂಪೊಂದು ಆಗ್ರಹಿಸಿದೆ.
2024ರಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಮಾರಂಭವನ್ನು ಕಾಂಗ್ರೆಸ್ ಪಕ್ಷವು ‘ರಾಜಕೀಯ ನಾಟಕ’ ಎಂದು ಕರೆದಿದ್ದಕ್ಕಾಗಿ ರಾಹುಲ್ ಭೇಟಿಗೆ ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ತಿಳಿದುಬಂದಿದೆ.
ಜ್ಯೋತಿರ್ ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಈ ಬಗ್ಗೆ ಮಾತನಾಡಿ, ‘ರಾಹುಲ್ ಹಿಂದೂ ವ್ಯಕ್ತಿ ಅಲ್ಲ. ಹಾಗಾಗಿ ಅವರನ್ನು ಮಂದಿರ ಪ್ರವೇಶಿಸಲು ಅನುಮತಿಸಬಾರದು’ ಎಂದಿದ್ದಾರೆ. ಜತೆಗೆ ‘ಹಿಂದೂಗಳನ್ನು ಟೀಕಿಸಿದ ವ್ಯಕ್ತಿ ಮಂದಿರ ಪ್ರವೇಶಿಸಲು ಅನುಮತಿ ನೀಡದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನಾನು ಮನವಿ ಮಾಡುತ್ತೇನೆ’ ಎಂದೂ ಅವರು ಹೇಳಿದ್ದಾರೆ.
ಅಯೋಧ್ಯೆಯ ಕೆಲವು ಸನ್ಯಾಸಿಗಳು ಕೂಡ ಅವಿಮುಕೇಶ್ವರಾನಂದರ ಆಗ್ರಹವನ್ನು ಬೆಂಬಲಿಸಿದ್ದಾರೆ.
ಮುಂಬರಲಿರುವ ವಿಧಾನಸಭೆ ಚುನಾವಣೆಗಾಗಿ ಫೋಟೊ ಮತ್ತು ಗಿಮಿಕ್‌ಗಾಗಿ ರಾಹುಲ್ ಮಂದಿರಕ್ಕೆ ಭೇಟಿ ನೀಡಲು ಯೋಜಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಹುಲ್ ಭೇಟಿ ಕುರಿತು ಕಾಂಗ್ರೆಸ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.