ADVERTISEMENT

ಲಾಕ್‌ಡೌನ್ ವಿರೋಧಿಸಿ ಪೊಲೀಸರತ್ತ ಕತ್ತಿ ಝಳಪಿಸಿದ ಸ್ವ–ಘೋಷಿತ ದೇವ ಮಹಿಳೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 5:44 IST
Last Updated 26 ಮಾರ್ಚ್ 2020, 5:44 IST
   

ಲಖನೌ: ಕೋವಿಡ್‌–19 ಭೀತಿಯಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಇದನ್ನು ಲೆಕ್ಕಿಸದೆ ಸಾರ್ವಜನಿಕವಾಗಿ ಧಾರ್ಮಿಕ ಸಭೆ ನಡೆಸುತ್ತಿದ್ದ ಸ್ವ-ಘೋಷಿತ ದೇವ ಮಹಿಳೆಯೊಬ್ಬರು ತಮ್ಮನ್ನುತಡೆಯಲು ಬಂದ ಪೊಲೀಸರತ್ತ ಕತ್ತಿ ಬೀಸಿರುವ ಘಟನೆ ಉತ್ತರ ಪ್ರದೇಶದ ಡಿಯೊರಿಯಾ ಜಿಲ್ಲೆಯಲ್ಲಿ ವರದಿಯಾಗಿದೆ.

ಬುಧವಾರ ಪ್ರಾರಂಭವಾದ ನವರಾತ್ರಿ ಉತ್ಸವದ ಭಾಗವಾಗಿ ಧಾರ್ಮಿಕ ಸಭೆ ಆಯೋಜಿಸಲಾಗಿತ್ತು. ಘಟನೆ ನಂತರ ಮಹಿಳೆ ಹಾಗೂ 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಿಯೋರಿಯಾ ಎಸ್‌ಪಿಶ್ರೀಪತ್‌ ಮಿಶ್ರಾ, ‘ಧಾರ್ಮಿಕ ಸಭೆ ಆಯೋಜನೆಯ ಬಗ್ಗೆ ನಮಗೆ ಬೆಳಗ್ಗೆ ಮಾಹಿತಿ ಬಂತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಸೆಕ್ಷನ್‌ 144 ಜಾರಿಯಲ್ಲಿರುವ ಬಗ್ಗೆ ಮಾಹಿತಿ ನೀಡಿ ಎಲ್ಲರೂ ಮನೆಗೆ ತೆರಳುವಂತೆ ವಿನಂತಿಸಿದರು. ಆದರೆ, ಸ್ವ–ಘೋಷಿತ ದೇವ ಮಹಿಳೆ ಜಗಳಕ್ಕೆ ನಿಂತರು’

ADVERTISEMENT

‘ಸಭೆಯನ್ನು ನಿಲ್ಲಿಸಲುನಿರಾಕರಿಸಿದ ಆಕೆ, ಪೊಲೀಸರನ್ನು ತಡೆಯಲು ಕತ್ತಿ ಝಳಪಿಸಲಾರಂಭಿಸಿದರು. ಹೀಗಾಗಿ ಪೊಲೀಸರು ಒತ್ತಾಯಪೂರ್ವಕವಾಗಿ ಗುಂಪು ಚದುರಿಸಿದರು. ಮಹಿಳೆ ಮತ್ತು ಆಕೆಯ ಪತಿ ಸೇರಿಒಟ್ಟು 13 ಜನರನ್ನು ಬಂಧಿಸಲಾಗಿದೆ. ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದರು.

ಮಂಗಳವಾರ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದ್ದಾರೆ. ಏಪ್ರಿಲ್‌ 15ರ ವರೆಗೆ ಇದು ಜಾರಿಯಲ್ಲಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.