ADVERTISEMENT

ನರೇಂದ್ರ ಮೋದಿ ದೇಶದ ಬಡತನವನ್ನು ಮುಚ್ಚಿಡುತ್ತಿದ್ದಾರೆ: ಶಿವಸೇನಾ

ಪಿಟಿಐ
Published 17 ಫೆಬ್ರುವರಿ 2020, 11:22 IST
Last Updated 17 ಫೆಬ್ರುವರಿ 2020, 11:22 IST
ಅಹಮದಾಬಾದ್‌ನಲ್ಲಿ ನಿರ್ಮಾಣವಾಗುತ್ತಿರುವ ಗೋಡೆ (ಪಿಟಿಐ ಚಿತ್ರ)
ಅಹಮದಾಬಾದ್‌ನಲ್ಲಿ ನಿರ್ಮಾಣವಾಗುತ್ತಿರುವ ಗೋಡೆ (ಪಿಟಿಐ ಚಿತ್ರ)   

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ದೇಶದಲ್ಲಿ ನಡೆಯುತ್ತಿರುವ ಸಿದ್ಧತೆಯು ಭಾರತೀಯರ ಗುಲಾಮ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಶಿವಸೇನಾ ಹೇಳಿದೆ.

ಭಾರತಕ್ಕೆ ಚಕ್ರವರ್ತಿಯೊಬ್ಬರು ಭೇಟಿ ನೀಡುತ್ತಿರುವಂತಿದೆ ಭಾರತಕ್ಕೆ ಟ್ರಂಪ್ ಭೇಟಿ ಎಂದು ಶಿವಸೇನಾ ತಮ್ಮ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಟ್ರಂಪ್ ಬರುವ ವೇಳೆ ಕೊಳೆಗೇರಿಗಳು ಕಾಣಿಸದಂತೆ ಗೋಡೆ ನಿರ್ಮಿಸಿರುವುದರ ಬಗ್ಗೆ ಟೀಕಿಸಿದ ಶಿವಸೇನಾ, ಟ್ರಂಪ್ ಭೇಟಿ ವಿದೇಶಿಮಾರುಕಟ್ಟೆಯಲ್ಲಿ ರೂಪಾಯಿ ಕುಸಿತವನ್ನು ತಡೆಯುವುದಿಲ್ಲ ಅಥವಾ ಗೋಡೆಯ ಆಚೆ ಬದಿಯಲ್ಲಿರುವ ಕೊಳೆಗೇರಿ ನಿವಾಸಿಗಳ ಬದುಕು ಸುಧಾರಣೆ ಮಾಡುವುದಿಲ್ಲ ಎಂದಿದೆ.

ADVERTISEMENT

ಸ್ವಾತಂತ್ರ್ಯ ಸಿಗುವ ಮುನ್ನ ಬ್ರಿಟಿಷ್ ರಾಜ ಅಥವಾ ರಾಣಿ ಭಾರತದಂತಿರುವ ಗುಲಾಮ ರಾಷ್ಟ್ರವೊಂದಕ್ಕೆ ಭೇಟಿ ನೀಡುತ್ತಿದ್ದರು. ತೆರಿಗೆದಾರರ ಹಣವನ್ನು ಬಳಸಿ ಟ್ರಂಪ್ ಸ್ವಾಗತಕ್ಕಾಗಿ ಸಿದ್ಧತೆ ನಡೆಸುತ್ತಿರುವುದು ಅದೇ ರೀತಿ ಇದೆ. ಇದು ಭಾರತೀಯರ ಗುಲಾಮ ಮನಸ್ಥಿತಿಯನ್ನು ಬಂಬಿಸುತ್ತಿದೆ.

ಟ್ರಂಪ್ ಬೆಂಗಾವಲು ವಾಹನ ಹಾದುಹೋಗುವ ದಾರಿಯಲ್ಲಿರುವ ಕೊಳೆಗೇರಿಗಳನ್ನು ಮರೆ ಮಾಡಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಬೃಹತ್ ಗೋಡೆಯೊಂದನ್ನುನಿರ್ಮಿಸಿದೆ. ಈ ಬಗ್ಗೆ ಟೀಕಿಸಿದ ಶಿವಸೇನಾ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಹಳ ವರ್ಷಗಳ ಹಿಂದೆ ಗರೀಭೀ ಹಟಾವೋ ಎಂಬ ಘೋಷಣೆಯೊಂದಿಗೆ ಯೋಜನೆ ರೂಪಿಸಿದ್ದರು. ಆದರೆ ಈಗ ಮೋದಿ ಗರೀಭೀ ಚುಪಾವೋ (ಬಡತವನ್ನು ಅಡಗಿಸಿ) ಯೋಜನೆ ರೂಪಿಸುವಂತಿದೆ.ಅಹಮದಾಬಾದ್‌ನಲ್ಲಿ ಈ ರೀತಿ ಗೋಡೆ ನಿರ್ಮಿಸುವುದಕ್ಕೆ ವಿಶೇಷ ಅನುದಾನವನ್ನು ನೀಡಲಾಗಿದೆಯೇ? ದೇಶದಾದ್ಯಂತ ಈ ರೀತಿಯ ಗೋಡೆ ನಿರ್ಮಿಸಲು ಅಮೆರಿಕ ಭಾರತಕ್ಕೆ ಸಾಲ ನೀಡಲಿದೆಯೇ?

ಟ್ರಂಪ್ ಅಹಮದಾಬಾದ್‌ನಲ್ಲಿ ಮೂರೇ ಮೂರು ಗಂಟೆ ಇರಲಿದ್ದಾರೆ. ಆದರೆ ಅಲ್ಲಿ ನಿರ್ಮಿಸಿರುವ ಗೋಡೆ ನಿರ್ಮಿಸಲು ಅಂದಾಜು ₹100 ಕೋಟಿ ಖರ್ಚು ಮಾಡಲಾಗಿದೆ.ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವಿನ ರಾಜಕೀಯ ಒಪ್ಪಂದ ಎಂದು ಶಿವಸೇನಾಆರೋಪಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.