ADVERTISEMENT

ಬಿಜೆಪಿ ಶಾಸಕರ ಅಮಾನತು ಸಮರ್ಥಿಸಿದ ರಾವುತ್‌: ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ

ಪಿಟಿಐ
Published 6 ಜುಲೈ 2021, 6:55 IST
Last Updated 6 ಜುಲೈ 2021, 6:55 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ವಿಧಾನಸಭೆಯ ಸಭಾಧ್ಯಕ್ಷರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಿಜೆಪಿಯ 12 ಶಾಸಕರನ್ನು ಅಮಾನತುಗೊಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ‘ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.‌

ವಿರೋಧ ಪಕ್ಷದ ಶಾಸಕರ ಅಮಾನತು ವಿರೋಧಿಸಿ, ಬಿಜೆಪಿ ನಾಯಕರು, ರಾಜಧಾನಿ ಮುಂಬೈ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಸಭಾಧ್ಯಕ್ಷರ ಕ್ರಮವನ್ನು ರಾವುತ್‌ ಸಮರ್ಥಿಸಿಕೊಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವುತ್‌, ‘ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಹಿಂದೆಂದೂ ಈ ರೀತಿ ಅನುಚಿತವಾಗಿ ನಡೆದುಕೊಂಡಿರಲಿಲ್ಲ. ಸಭಾಧ್ಯಕ್ಷರ ಮೈಕ್ ಅನ್ನು ಮುರಿಯುವುದು ಮತ್ತು ಅವರ ವಿರುದ್ಧ ನಿಂದನಾತ್ಮಕ ಭಾಷೆ ಬಳಸುವುದನ್ನು ಸಹಿಸಲಾಗದು. ಇದು ಮಹಾರಾಷ್ಟ್ರದ ಸಂಸ್ಕೃತಿಯಲ್ಲ‘ ಎಂದರು.

ADVERTISEMENT

ಈ ಮಧ್ಯೆ ವಿರೋಧ ಪಕ್ಷದ ಶಾಸಕರ ವಿರುದ್ಧ ತೆಗೆದುಕೊಂಡ ಕ್ರಮವನ್ನು ಖಂಡಿಸಿ ಬಿಜೆಪಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿತು. ಬಿಜೆಪಿಯ ಹಲವು ಶಾಸಕರು ಮುಂಬೈನ ವಿಧಾನಸಭಾ ಭವನಕ್ಕೆ ನುಗ್ಗಲು ಪ್ರಯತ್ನಿಸಿದರು. ನಂತರ ಮೆಟ್ಟಿಲುಗಳ ಮೇಲೆ ಕುಳಿತು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ-ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್) ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿಧಾನಸಭೆಯ ಎರಡು ದಿನಗಳ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ಹಲವು ನಾಟಕೀಯ ಬೆಳವಣಿಗಳಿಗೆ ಸಾಕ್ಷಿಯಾಯಿತು. ಸಭಾಧ್ಯಕ್ಷ ಭಾಸ್ಕರ್ ಜಾಧವ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಬಿಜೆಪಿಯ 12 ಶಾಸಕರನ್ನು ಸದನದಿಂದ ಒಂದು ವರ್ಷ ಅಮಾನತುಗೊಳಿಸಬೇಕೆಂಬ ನಿಲುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಮಂಡಿಸಿದದರು. ಸದನ ಇದನ್ನು ಧ್ವನಿಮತದಿಂದ ಅಂಗೀಕರಿಸಿತ್ತು. ಅಮಾನತು ಅವಧಿಯಲ್ಲಿ ಈ ಶಾಸಕರಿಗೆ ಮುಂಬೈ, ನಾಗಪುರದಲ್ಲಿರುವ ಸಚಿವಾಲಯದ ಅವರಣಕ್ಕೆ ಪ್ರವೇಶ ನೀಡಲಾಗುವುದಿಲ್ಲ ಎಂದು ಪರಬ್‌ ತಿಳಿಸಿದ್ದರು.

ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಅವರು, ‘ನಮ್ಮ ಪಕ್ಷದ ಶಾಸಕರ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ಬಿಜೆಪಿಯ ಯಾವ ಶಾಸಕರೂ ಅನುಚಿತವಾಗಿ ನಡೆದುಕೊಂಡಿಲ್ಲ. ಸ್ಪೀಕರ್ ಜಾಧವ್‌ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.