ADVERTISEMENT

ವೃದ್ಧರ ಆರೈಕೆ ಮಾಡದಿದ್ದರೆ ಆಸ್ತಿ ವರ್ಗಾವಣೆ ರದ್ದು: ಮದ್ರಾಸ್ ಹೈಕೋರ್ಟ್‌

ಪಿಟಿಐ
Published 19 ಮಾರ್ಚ್ 2025, 14:42 IST
Last Updated 19 ಮಾರ್ಚ್ 2025, 14:42 IST
ಮದ್ರಾಸ್ ಹೈಕೋರ್ಟ್: ಸಂಗ್ರಹ ಚಿತ್ರ
ಮದ್ರಾಸ್ ಹೈಕೋರ್ಟ್: ಸಂಗ್ರಹ ಚಿತ್ರ   

ಚೆನ್ನೈ: ಮಕ್ಕಳು ಅಥವಾ ಹತ್ತಿರದ ಸಂಬಂಧಿಕರು ಹಿರಿಯ ನಾಗರಿಕರ ಆರೈಕೆ ಮಾಡದೆ ಇದ್ದರೆ, ದಾನಪತ್ರದ ಮೂಲಕ, ಇತ್ಯರ್ಥ ಕರಾರಿನ ಮೂಲಕ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿದ್ದನ್ನು ರದ್ದು ಮಾಡಲು ಹಿರಿಯ ನಾಗರಿಕರಿಗೆ ಅವಕಾಶ ಇದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ಆರೈಕೆ ಮಾಡದೆ ಇದ್ದರೆ ಆಸ್ತಿ ವರ್ಗಾವಣೆ ರದ್ದಾಗುತ್ತದೆ ಎಂಬ ಷರತ್ತು ಕರಾರಿನಲ್ಲಿ ಉಲ್ಲೇಖವಾಗದೆ ಇದ್ದರೂ, ಕರಾರು ಪತ್ರವನ್ನು ಹಿರಿಯ ನಾಗರಿಕರು ರದ್ದುಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಮೃತ ಎಸ್. ನಾಗಲಕ್ಷ್ಮಿ ಎನ್ನುವವರ ಸೊಸೆ ಎಸ್. ಮಾಲಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣಿಯಂ ಮತ್ತು ಕೆ. ರಾಜಶೇಖರ್ ಅವರು ಇರುವ ವಿಭಾಗೀಯ ಪೀಠವು ವಜಾಗೊಳಿಸಿದೆ.

ADVERTISEMENT

ನಾಗಲಕ್ಷ್ಮಿ ಅವರು ತಮ್ಮ ಮಗ ಕೇಶವನ್ ಹೆಸರಿನಲ್ಲಿ ಇತ್ಯರ್ಥ ಕರಾರು ಮಾಡಿದ್ದರು. ಮಗ ಮತ್ತು ಸೊಸೆ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಆಸೆಯಿಂದ ಅವರು ಹೀಗೆ ಮಾಡಿದ್ದರು. ಆದರೆ ಕೇಶವನ್ ಆ ಕೆಲಸ ಮಾಡಲಿಲ್ಲ. ಕೇಶವನ್ ಮೃತರಾದ ನಂತರ ಸೊಸೆ ಕೂಡ ನಾಗಲಕ್ಷ್ಮಿ ಅವರ ಬಗ್ಗೆ ಉಪೇಕ್ಷೆ ತೋರಿದರು. ಆಗ ನಾಗಲಕ್ಷ್ಮಿ ಅವರು ನಾಗಪಟ್ಟಣಂ ಕಂದಾಯ ಉಪವಿಭಾಗಾಧಿಕಾರಿಯ (ಆರ್‌ಡಿಒ) ಮೊರೆ ಹೋದರು.

ನಾಗಲಕ್ಷ್ಮಿ ಮತ್ತು ಮಾಲಾ ಅವರ ಹೇಳಿಕೆ ದಾಖಲಿಸಿಕೊಂಡ ಆರ್‌ಡಿಒ, ಇತ್ಯರ್ಥ ಕರಾರನ್ನು ರದ್ದುಪಡಿಸಿದರು. ಇದನ್ನು ಪ್ರಶ್ನಿಸಿ ಮಾಲಾ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತು. ಹೀಗಾಗಿ, ಮಾಲಾ ಅವರು ಮೇಲ್ಮನವಿ ಸಲ್ಲಿಸಿದರು.

ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 23(1)ಅನ್ನು ಹಿರಿಯ ನಾಗರಿಕರ ಹಿತ ಕಾಯುವ ಉದ್ದೇಶದಿಂದ ರೂಪಿಸಲಾಗಿದೆ. ತಮ್ಮ ಆಸ್ತಿಯನ್ನು ಪಡೆದ ವ್ಯಕ್ತಿಯು ತಮ್ಮ ಮೂಲ ಅಗತ್ಯಗಳನ್ನು ನೋಡಿಕೊಳ್ಳುತ್ತಾನೆ ಎನ್ನುವ ನಿರೀಕ್ಷೆ ಅವರಲ್ಲಿರುತ್ತದೆ. ಆದರೆ ಈ ಕೆಲಸವನ್ನು ಆಸ್ತಿ ಪಡೆದ ವ್ಯಕ್ತಿಯು ಮಾಡದಿದ್ದರೆ, ಆಸ್ತಿ ವರ್ಗಾವಣೆಯನ್ನು ರದ್ದುಪಡಿಸುವಂತೆ ನ್ಯಾಯಮಂಡಳಿಯನ್ನು ಕೋರುವ ಹಕ್ಕು ಹಿರಿಯ ನಾಗರಿಕರಿಗೆ ಇರುತ್ತದೆ ಎಂದು ಪೀಠವು ಹೇಳಿದೆ.

ಈ ಪ್ರಕರಣದಲ್ಲಿ ಆಸ್ತಿ ವರ್ಗಾವಣೆ ಮಾಡಿದ ಮಹಿಳೆಯನ್ನು ಸೊಸೆಯು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಕೂಡ ಪೀಠ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.