ADVERTISEMENT

ಸೋಲಿನ ಸೂಚನೆ ಸಿಕ್ಕ ಬಳಿಕ ಪ್ರಧಾನಿಯವರಿಗೆ ವಾಸ್ತವತೆಯ ಅರಿವಾಗಿದೆ: ಪ್ರಿಯಾಂಕಾ

ಪಿಟಿಐ
Published 19 ನವೆಂಬರ್ 2021, 9:15 IST
Last Updated 19 ನವೆಂಬರ್ 2021, 9:15 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ: ‘ಮುಂಬರುವ ಚುನಾವಣೆಗಳಲ್ಲಿ ಸೋಲುವ ಸೂಚನೆ ಸಿಕ್ಕ ಬಳಿಕ ಪ್ರಧಾನಿಯವರಿಗೆ ಏಕಾಏಕಿ ದೇಶದ ವಾಸ್ತವತೆಯ ಅರಿವು ಆಗಿಬಿಟ್ಟಿದೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಧಾನಿ ಮೋದಿ ಅವರು ಶುಕ್ರವಾರ ಬೆಳಿಗ್ಗೆ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಪ್ರಿಯಾಂಕಾ ಅವರು ‘ರೈತರು ಪ್ರಧಾನಿಯವರಿಗೆ ದೇಶದ ವಾಸ್ತವತೆಯ ಅರಿವು ಮೂಡಿಸಿದ್ದಾರೆ’ ಎಂದುಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘350ಕ್ಕೂ ಹೆಚ್ಚು ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದ ಅವಧಿಯಲ್ಲಿ ಸುಮಾರು 600 ರೈತರು ಹುತಾತ್ಮರಾಗಿದ್ದಾರೆ. ನರೇಂದ್ರ ಮೋದಿಯವರೇ, ನಿಮ್ಮ ಸಚಿವರೊಬ್ಬರ ಮಗ ರೈತರ ಸಾವಿಗೆ ಕಾರಣವಾಗಿದ್ದರೂ ನೀವು ರೈತರ ಪರ ಕಾಳಜಿವಹಿಸಲಿಲ್ಲ. ನಿಮ್ಮ ಪಕ್ಷದ ನಾಯಕರು ರೈತರನ್ನು ಅವಮಾನಿಸಿದ್ದಾರೆ. ರೈತರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಗೂಂಡಾಗಳು, ದುಷ್ಕರ್ಮಿಗಳು ಎಂದೆಲ್ಲ ಕರೆದಿದ್ದಾರೆ. ನೀವೇ ಅವರನ್ನು ’ಆಂದೋಲನ ಜೀವಿ’ ಎಂದು ಬಣ್ಣಿಸಿದ್ದೀರಿ. ಲಾಠಿಯಿಂದ ಹೊಡೆಸಿದ್ದೀರಿ. ಅವರನ್ನು ಬಂಧಿಸುವಂತೆಯೂ ಮಾಡಿದ್ದೀರಿ’ ಎಂದು ಆರೋಪಿಸಿದ್ದಾರೆ.

‘ಈಗ, ಚುನಾವಣೆಯಲ್ಲಿ ಸೋಲನ್ನು ಅನುಭವಿಸುವ ಸೂಚನೆ ಸಿಕ್ಕ ಕೂಡಲೇ, ಏಕಾಏಕಿ ನೀವು ಈ ದೇಶದ ವಾಸ್ತವವನ್ನು ಅರಿತು ಕೊಂಡಿದ್ದೀರಿ. ಈ ದೇಶ ರೈತರಿಂದ ನಿರ್ಮಾಣವಾಗಿದೆ. ಇದು ರೈತರ ದೇಶ. ಅವರೇ ನೈಜ ದೇಶದ ರಕ್ಷಕರು. ರೈತರ ಹಿತಾಸಕ್ತಿಗಳನ್ನು ಹತ್ತಿಕ್ಕುವ ಮೂಲಕ ಯಾವುದೇ ಸರ್ಕಾರದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

‘ಹೀಗೆ ನಿಮ್ಮ ಉದ್ದೇಶಗಳು ಮತ್ತು ವರ್ತನೆಯಲ್ಲಿ ದಿಢೀರನೆ ಉಂಟಾಗುತ್ತಿರುವ ಬದಲಾವಣೆಯನ್ನು ನಂಬುವುದೂ ಕಷ್ಟವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ನಾವು ರೈತರನ್ನು ಸದಾ ಶ್ಲಾಘಿಸುತ್ತೇವೆ’ ಎಂದಿರುವ ಪ್ರಿಯಾಂಕಾ ಗಾಂಧಿ, ‘ಜೈ ಜವಾನ್, ಜೈ ಕಿಸಾನ್, ಜೈ ಭಾರತ್’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.