ADVERTISEMENT

ಕ್ರೌರ್ಯ ಆರೋಪ: ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಎತ್ತಿಹಿಡಿದ ಸೆಷನ್ಸ್ ಕೋರ್ಟ್

ಪತಿ, ಅತ್ತೆ– ಮಾವ ವಿರುದ್ಧ ಕ್ರೌರ್ಯದ ಆರೋಪಕ್ಕೆ ದೋಷರೋಪ ನಿಗದಿ 

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 13:44 IST
Last Updated 18 ನವೆಂಬರ್ 2023, 13:44 IST
   

ನವದೆಹಲಿ: ಮಹಿಳೆಯ ಪತಿ, ಅತ್ತೆ ಮತ್ತು ಮಾವಂದಿರ ವಿರುದ್ಧ ಕ್ರೌರ್ಯ ಮತ್ತು ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ದೋಷಾರೋಪ ನಿಗದಿ ಮಾಡಿರುವ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶವನ್ನು ಇಲ್ಲಿನ ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದೆ. 

ಕ್ರೌರ್ಯದ ಅಪರಾಧಕ್ಕಾಗಿ ವಿವಾಹಿತ ಮಹಿಳೆಯು ಅತ್ತೆ, ಮಾವನ ವಿರುದ್ಧ ದೂರು ನೀಡುವ ಮೊದಲು ಪತಿಯ ಮನೆಯಲ್ಲಿ ಉಳಿಯಲು ಕನಿಷ್ಠ ಸಮಯ ನಿಗದಿಪಡಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಅಂತಹ ಅಪರಾಧ ಕೆಲವೇ ಗಂಟೆಗಳ ಕಾಲ ಇರುವಾಗಲೂ ನಡೆಯಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಐಪಿಸಿ ಸೆಕ್ಷನ್ 498 ಎ (ಕ್ರೌರ್ಯಕ್ಕೆ ಒಳಗಾದ ಮಹಿಳೆಯ ಪತಿ ಅಥವಾ ಸಂಬಂಧಿಕರು) ಮತ್ತು 379 (ಕಳ್ಳತನ) ಅಡಿಯಲ್ಲಿ ಆರೋಪಗಳನ್ನು ದಾಖಲಿಸುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ವಿರುದ್ಧ ಮಹಿಳೆಯ ಪತಿ ಮತ್ತು ಅತ್ತೆ ಮಾವ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸುನಿಲ್ ಗುಪ್ತಾ ವಿಚಾರಣೆ ನಡೆಸಿದರು.

ADVERTISEMENT

 ಪತಿ, ಮಾವ ಮತ್ತು ಅತ್ತೆ ಮಹಿಳೆಯಿಂದ ವರದಕ್ಷಿಣೆಗಾಗಿ ಒತ್ತಾಯಿಸಿ, ಥಳಿಸುತ್ತಿದ್ದರು. ಈ ಮೂವರು ಆಕೆಯ ಸೋದರ ಮಾವನೊಂದಿಗೆ ಸೇರಿ ಆಭರಣಗಳನ್ನು ಬಲವಂತವಾಗಿ ಕಸಿದುಕೊಂಡು ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ಪೊಲೀಸರು ಆರೋಪಪಟ್ಟಿಯಲ್ಲಿ  ತಿಳಿಸಿದ್ದಾರೆ.

ಆರೋಪಪಟ್ಟಿ ದಾಖಲಿಸುವ ಹಂತದಲ್ಲಿ, ದಾಖಲೆಯಲ್ಲಿರುವ ವಸ್ತುಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಪ್ರಕರಣ ದಾಖಲಿಸಲಾಗಿದೆಯೇ ಎಂಬುದನ್ನು ಕೋರ್ಟ್‌ ಗಮನಿಸಬೇಕು. ಶಿಕ್ಷೆಗೆ ಇದು ಸಾಕಾಗುತ್ತದೆಯೇ ಅಥವಾ ಇಲ್ಲವೇ ಎಂದು ನೋಡಲು ನ್ಯಾಯಾಲಯವು ಆ ಹಂತದಲ್ಲಿ ದಾಖಲೆಯಲ್ಲಿರುವ ವಸ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಧೀಶರು ಇತ್ತೀಚಿನ ಆದೇಶದಲ್ಲಿ ತಿಳಿಸಿದ್ದಾರೆ.

ದೂರುದಾರರು ಕೇವಲ 11 ದಿನಗಳ ಕಾಲ ಪತಿಯ ಮನೆಯಲ್ಲಿಯೇ ಇರುವುದರಿಂದ ಯಾವುದೇ ಕಿರುಕುಳ ಸಾಧ್ಯವಿಲ್ಲ ಎಂಬ ಪ್ರತಿವಾದಿ ವಕೀಲರ ವಾದ ತಳ್ಳಿಹಾಕಿದ ಕೋರ್ಟ್‌, ಸೆಕ್ಷನ್ 498ಎ ಅಡಿ ಅಪರಾಧಕ್ಕಾಗಿ ತನ್ನ ಅತ್ತೆ ಮಾವನ ವಿರುದ್ಧ ದೂರು ನೀಡುವ ಮೊದಲು ವಿವಾಹಿತ ಮಹಿಳೆ ಪತಿಯ ಮನೆಯಲ್ಲಿ ಉಳಿಯಲು ಕನಿಷ್ಠ ಸಮಯವನ್ನು ನಿಗದಿಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದೆ.

ಐಪಿಸಿ ಸೆಕ್ಷನ್ 379ರ ಅಡಿ ದೂರುದಾರರ ಸೋದರ ಸಂಬಂಧಿ ವಿರುದ್ಧ ಆರೋಪ ಪಟ್ಟಿ ದಾಖಲಿಸಿರುವುದನ್ನು ಕೋರ್ಟ್‌ ಗಮನಿಸಿದೆ. ಆರೋಪಿ ಅಂಗವಿಕಲನಾಗಿರುವ ಕಾರಣ ಅಪರಾಧ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆರೋಪಿಯು ಅಪರಾಧ ಎಸಗುವಷ್ಟು ದೈಹಿಕವಾಗಿ ಸಮರ್ಥನಾಗಿದ್ದಾನೆಯೇ ಎಂಬುದನ್ನು ಎರಡೂ ಕಡೆಗಳ ಸಾಕ್ಷ್ಯದ ಬಳಿಕ ವಿಚಾರಣೆ ವೇಳೆ ನಿರ್ಧರಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ಹಸ್ತಕ್ಷೇಪ ಸಮರ್ಥಿಸಲು ಆದೇಶದಲ್ಲಿ ಯಾವುದೇ ಕಾನೂನು ಬಾಹಿರ ಕಂಡುಬಂದಿಲ್ಲ ಎಂದು ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.