ನಕ್ಸಲರು (ಪ್ರಾತಿನಿಧಿಕ ಚಿತ್ರ)
ಕಾನ್‌ಕೇರ್: ಭದ್ರತಾ ಪಡೆಗಳ ಮೇಲೆ ದಾಳಿ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಓರ್ವ ಮಹಿಳೆ ಸೇರಿದಂತೆ ಒಟ್ಟು 7 ಮಂದಿ ನಕ್ಸಲರು ಛತ್ತೀಸಗಢದ ಕಾನ್‌ಕೇರ್ ಜಿಲ್ಲೆಯಲ್ಲಿ ಶುಕ್ರವಾರ ಶರಣಾಗಿದ್ದಾರೆ. ಅವರ ತಲೆಗೆ ಒಟ್ಟು ₹32 ಲಕ್ಷದ ಬಹುಮಾನ ಇತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಟೊಳ್ಳು ಮತ್ತು ಅಮಾನವೀಯ ಮಾವೋ ಸಿದ್ಧಾಂತದಿಂದ ಹಾಗೂ ನಕ್ಸಲ್‌ನ ಹಿರಿಯ ನಾಯಕರಿಂದ ಬುಡಕಟ್ಟು ಜನರ ಮೇಲಿನ ಶೋಷಣೆಗೆ ಬೇಸತ್ತು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ’ ಎಂದು ಕಾನ್‌ಕೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣ್ ಇಲೆಸೆಲ ತಿಳಿಸಿದ್ದಾರೆ.
ಶರಣಾದ ಮಮಯಾ ಅಲಿಯಾಸ್ ಶಾಂತ ಅಲಿಯಾಸ್ ವಸಂತಾ ಬಟ್ಟುಲೈ (60), ದಿನೇಶ್ ಮಟ್ಟಾಮಿ (20) ಹಾಗೂ ಅಯ್ತು ರಾಮ್ ಪೊಟಯ್ (27)ರ ಮೇಲೆ ತಲಾ ₹ 8 ಲಕ್ಷ ಬಹುಮಾನ ಇತ್ತು ಎಂದು ಅವರು ತಿಳಿಸಿದ್ದಾರೆ.
ನೆರೆಯ ತೆಲಂಗಾಣದ ಕರೀಂನಗರ ಜಿಲ್ಲೆಯ ನಿವಾಸಿಯಾಗಿರುವ ಮಮತಾ ಅವರು ವಿಭಾಗೀಯ ಸಮಿತಿ ಸದಸ್ಯರಾಗಿ ಸಕ್ರಿಯರಾಗಿದ್ದರು. ಮಾವೋವಾದಿಗಳ ಉತ್ತರ ಬಸ್ತಾರ್ ವಿಭಾಗದಲ್ಲಿ ಕಾನೂನುಬಾಹಿರ ಸಂಘಟನೆಯ ವಿಭಾಗವಾದ ‘ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘಟನೆ’ (ಕೆಎಎಂಎಸ್) ಮುಖ್ಯಸ್ಥರಾಗಿದ್ದರು ಎಂದು ಅವರು ಹೇಳಿದ್ದಾರೆ.
ಅವರು 1996 ಮತ್ತು 2024 ರ ನಡುವೆ ಒಟ್ಟು 26 ನಕ್ಸಲ್ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದರು. 2015ರಲ್ಲಿ ಕಾನ್‌ಕೇರ್ ಜಿಲ್ಲೆಯ ಕೊಯಲಿಬೀಡಾ ಪ್ರದೇಶದಲ್ಲಿ ಕಚ್ಚಾ ಬಾಂಬ್ ಸ್ಫೋಟದಲ್ಲಿ ಇಬ್ಬರು ಬಿಎಸ್‌ಎಫ್ ಸಿಬ್ಬಂದಿ ಸಾವಿಗೀಡಾಗಿದ್ದರು.
ಶರಣಾದ ಮತ್ತೊಬ್ಬ ಕೇಡರ್ ಜಮುನಾ ಅಲಿಯಾಸ್ ನೀರ ನೇತಮ್ (50) ಪರ್ತಾಪುರ ಪ್ರದೇಶ ಸಮಿತಿಯ ಸದಸ್ಯರಾಗಿ ಸಕ್ರಿಯರಾಗಿದ್ದರು.
ಇಟ್ವಾರಿನ್ ಪಡ್ಡಾ (25), ಸಂಜಯ್ ನರೆಟಿ (23) ಮತ್ತು ಸಗ್ನು ರಾಮ್ ಅಂಚಲಾ (24) ಶರಣಾದ ಇತರರು. ಅವರ ತಲೆಗೆ ತಲಾ ₹ 1 ಲಕ್ಷ ಬಹುಮಾನ ಘೋಷಣೆಯಾಗಿತ್ತು.
ಶರಣಾದ ಎಲ್ಲ ನಕ್ಸಲರಿಗೆ ತಲಾ ₹ 25 ಸಾವಿರ ನೆರವು ನೀಡಲಾಗಿದ್ದು, ಸರ್ಕಾರದ ನೀತಿಯಂತೆ ಮತ್ತಷ್ಟು ನೆರವು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ, ಕಾನ್‌ಕೇರ್ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.