ADVERTISEMENT

ಮೋದಿ ಸರ್ಕಾರದ ಅವಧಿಯಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಸಚಿವ ಮಾಂಡವಿಯಾ

ಪಿಟಿಐ
Published 4 ಆಗಸ್ಟ್ 2025, 13:11 IST
Last Updated 4 ಆಗಸ್ಟ್ 2025, 13:11 IST
<div class="paragraphs"><p>ಮನಸುಖ್ ಮಾಂಡವಿಯಾ</p></div>

ಮನಸುಖ್ ಮಾಂಡವಿಯಾ

   

ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಳೆದ 10 ವರ್ಷಗಳಲ್ಲಿ 17 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಈ ಹಿಂದೆ ದಶಕಗಳ ಕಾಲ ಆಡಳಿತದಲ್ಲಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ 3 ಕೋಟಿ ಉದ್ಯೋಗ ಸೃಷ್ಟಿಯಾಗಿತ್ತು’ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮನಸುಖ್ ಮಾಂಡವಿಯಾ ಲೋಕಸಭೆಗೆ ತಿಳಿಸಿದರು.

ADVERTISEMENT

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕಳೆದ 10 ವರ್ಷಗಳಲ್ಲಿ 10 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಸಿರುವುದು ದಾಖಲೆಯಾಗಿದೆ. ಹತ್ತು ವರ್ಷಗಳ ಯುಪಿಎ ಆಡಳಿತದಲ್ಲಿ ಕೇವಲ 3 ಕೋಟಿ ಉದ್ಯೋಗ ಮಾತ್ರ ಸೃಷ್ಟಿಯಾಗಿತ್ತು. ಇದನ್ನು ನಾವಾಗಿಯೇ ಹೇಳುತ್ತಿಲ್ಲ, ಆರ್‌ಬಿಐ ನೀಡಿದ ಅಂಕಿಅಂಶಗಳಲ್ಲಿ ಈ ಮಾಹಿತಿ ಇದೆ. ಸ್ವಾತಂತ್ರ್ಯಾ ನಂತರ ಪ್ರತೀ ವರ್ಷ ಉದ್ಯೋಗ ಸೃಷ್ಟಿಯಾದ ಬಗ್ಗೆ ಆರ್‌ಬಿಐ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ. ಕಳೆದ 16 ತಿಂಗಳಲ್ಲಿ ಕೇಂದ್ರವು 11 ಲಕ್ಷ ಯುವಜನತೆಗೆ ಕೆಲಸ ಸಿಗುವಂತೆ ಮಾಡಿದೆ’ ಎಂದರು.

‘ಮೋದಿಯವರು ಕೇವಲ ಉದ್ಯೋಗವನ್ನು ಸೃಷ್ಟಿಸಿಲ್ಲ, ಬದಲಾಗಿ ಮುಂದಿನ 5 ವರ್ಷಗಳ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಯನ್ನೂ ರೂಪಿಸಿದ್ದಾರೆ. ‘ಮೋದಿ 3.0’ ಆರಂಭದಲ್ಲೇ ವಿಕಸಿತ್ ಭಾರತ್ ರೋಜಗಾರ್‌ ಯೋಜನೆಯನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ₹2ಲಕ್ಷ ಕೋಟಿ ವೆಚ್ಚದಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಇದೆ. ಈ ಯೋಜನೆಯಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದೇವೆ‘ ಎಂದು ವಿವರಿಸಿದರು.

ಪಿಎಂ ವಿಕಸಿತ್ ಭಾರತ ರೋಜಗಾರ್‌ ಯೋಜನೆಯು ಈ ವರ್ಷದ ಆ.1ರಿಂದ ಆರಂಭವಾಗಿದೆ. ಈ ಯೋಜನೆಯ ಪ್ರಯೋಜನಗಳು 2025ರ ಆಗಸ್ಟ್ 1 ರಿಂದ  2027 ಜುಲೈ 31 ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಅನ್ವಯಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.