ADVERTISEMENT

ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ: ಆರು ಮಂದಿ ಭಕ್ತರು ಸಾವು

ಪಿಟಿಐ
Published 8 ಜನವರಿ 2025, 17:06 IST
Last Updated 8 ಜನವರಿ 2025, 17:06 IST
<div class="paragraphs"><p>ತಿರುಪತಿಯಲ್ಲಿ ಕಾಲ್ತುಳಿತ</p></div>

ತಿರುಪತಿಯಲ್ಲಿ ಕಾಲ್ತುಳಿತ

   

( ಚಿತ್ರ ಕೃಪೆ–X/@sudhirjourno)

ತಿರುಪತಿ: ತಿರುಪತಿಯ ಪ್ರಸಿದ್ಧ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಬುಧವಾರ ರಾತ್ರಿ ‘ವೈಕುಂಠ ದ್ವಾರ ದರ್ಶನ’ದ ಟೋಕನ್ ಪಡೆದುಕೊಳ್ಳು ವಾಗ ಉಂಟಾದ ಕಾಲ್ತುಳಿತದಲ್ಲಿ ಆರು ಮಂದಿ ಭಕ್ತರು ಮೃತಪಟ್ಟಿದ್ದಾರೆ.

ADVERTISEMENT

ಮೃತರಲ್ಲಿ ಮೂವರು ಮಹಿಳೆಯರು. ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೂರಾರು ಭಕ್ತರು ಸೇರಿದ್ದು, ಟೋಕನ್‌ ಪಡೆಯಲು ಒಟ್ಟಿಗೆ ಮುಗಿಬಿದ್ದುದು ಅವಘಡಕ್ಕೆ ಕಾರಣವಾಗಿದೆ.  

ವೈಕುಂಠ ದ್ವಾರ ದರ್ಶನವು ಜನವರಿ 10ರಿಂದ 10 ದಿನಗಳವರೆಗೆ ಇರಲಿದೆ. ಇದಕ್ಕಾಗಿ ದೇಶದ ವಿವಿಧೆಡೆಗಳಿಂದ ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು.

ಮೃತರ ಪೈಕಿ ಒಬ್ಬರ ಗುರುತು ಸಿಕ್ಕಿದೆ. ಗೇಟು ತೆರೆಯುತ್ತಿದ್ದಂತೆ ಎಲ್ಲರೂ ನುಗ್ಗಿದರು. ಹೀಗಾಗಿ ಕಾಲ್ತುಳಿತ ಉಂಟಾಯಿತು ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್.ನಾಯ್ಡು ತಿಳಿಸಿದ್ದಾರೆ.

ಪ್ರತಿ ವರ್ಷ ಇಲ್ಲಿನ ದೇವಸ್ಥಾನದಲ್ಲಿ ‘ವೈಕುಂಠ ದ್ವಾರ ದರ್ಶನ’ಕ್ಕಾಗಿ ದೇಶದ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. 

‘ದೇವಸ್ಥಾನ ಆವರಣದ ವಿಷ್ಣು ನಿವಾಸ ಬಳಿ ಆದ ನೂಕುನುಗ್ಗಲಿನಲ್ಲಿ ಆರು ಮಂದಿ ಭಕ್ತರು ಮೃತಪಟ್ಟಿದ್ದು, ನನಗೆ ತೀವ್ರ ನೋವಾಗಿದೆ’ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಟೆಲಿಕಾನ್ಫರೆನ್ಸ್‌ ಮೂಲಕ ಅವಘಡದ ಮಾಹಿತಿ ಪಡೆದಿರುವ ಮುಖ್ಯಮಂತ್ರಿಯವರು, ಗುರುವಾರ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ ಎಂದು ಟಿಟಿಡಿ ಅಧ್ಯಕ್ಷರು ತಿಳಿಸಿದ್ದಾರೆ. 

‘ಕೆಲವು ಲೋಪಗಳಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಭಕ್ತರ ಸಾವಿಗಾಗಿ ದೇವರ ಕ್ಷಮೆ ಕೋರುತ್ತೇವೆ’ ಎಂದು ಟಿಟಿಸಿ ಆಡಳಿತ ಮಂಡಳಿ ಸದಸ್ಯ ಭಾನುಪ್ರಕಾಶ್ ಪ್ರತಿಕ್ರಿಯಿಸಿದರು.  

ದುರಂತ ಸ್ಥಳದಲ್ಲಿನ ಗೊಂದಲದ ಸ್ಥಿತಿ, ತೀವ್ರವಾಗಿ ಗಾಯಗೊಂಡವರಿಗೆ ಪೊಲೀಸ್‌ ಸಿಬ್ಬಂದಿಯೇ ಸಿಪಿಆರ್ (ಉಸಿರಾಟ ಕುರಿತು ಪ್ರಾಥಮಿಕ ಆರೈಕೆ) ಮಾಡುತ್ತಿರುವುದು ಹಾಗೂ ಗಾಯಾಳುಗಳನ್ನು ಆಂಬುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.