ADVERTISEMENT

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, ದಿಢೀರ್ ಪ್ರವಾಹ; 14 ಮಂದಿ ಸಾವಿನ ಶಂಕೆ

ಪಿಟಿಐ
Published 20 ಆಗಸ್ಟ್ 2022, 6:23 IST
Last Updated 20 ಆಗಸ್ಟ್ 2022, 6:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಹಾಗೂ ಹಠಾತ್ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, 13 ಮಂದಿ ಸಾವಿಗೀಡಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಚೋವರಿ ತಹಸಿಲ್‌ನ ಬನೆತ್ ಗ್ರಾಮದಲ್ಲಿ ಶನಿವಾರ ಮುಂಜಾನೆ ಭೂಕುಸಿತದಿಂದಾಗಿ ಮನೆ ಉರುಳಿ ಬಿದ್ದು, ಮೂವರು ಮೃತಪಟ್ಟಿದ್ದಾರೆ.

ಮಂಡಿ-ಕಟೌಲಾ-ಪರಾಶಾರ್ ಮಾರ್ಗದ ಬಾಗಿ ನುಲ್ಲಾ ಎಂಬಲ್ಲಿನ ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಆಕೆಯ ಕುಟುಂಬದ ಐದು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಾಗಿ ಹಾಗೂ ಹಳೆ ಕಟೌಲಾ ಪ್ರದೇಶಗಳ ನಡುವೆ ಹಲವಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಗೋಹರ್ ಡೆವಲಪ್‌‌ಮೆಂಟ್ ಬ್ಲಾಕ್‌ನ ಕಶಾನ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನ ಅವಶೇಷಗಳಡಿಯಲ್ಲಿ ಮತ್ತೊಂದು ಕುಟುಂಬದ ಎಂಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಲ್ಲಿ ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ.

ಇದನ್ನೂ ಓದಿ:

ಮಂಡಿ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ದಿಢೀರ್ ಪ್ರವಾಹದಿಂದಾಗಿ ವಿವಿಧ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿದುಕೊಂಡಿದೆ. ವಾಹನಗಳು ಹಾನಿಗೀಡಾಗಿವೆ.

ಅತ್ತ ಕಾಂಗ್ರಾ ಜಿಲ್ಲೆಯಲ್ಲಿ ಚಕ್ಕಿ ನದಿ ಮೇಲಿನ ರೈಲ್ವೆಸೇತುವೆ ಕುಸಿದಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.