ADVERTISEMENT

ಸಿಲ್ಕ್ಯಾರಾ: ಕಾರ್ಮಿಕರ ರಕ್ಷಣಾ ಕಾರ್ಯ ಮತ್ತೆ ಸ್ಥಗಿತ

25 ಟನ್‌ ತೂಕದ ಕೊರೆಯುವ ಯಂತ್ರ ಇರಿಸಿದ ಜಾಗದಲ್ಲಿ ಬಿರುಕು

ಪಿಟಿಐ
Published 23 ನವೆಂಬರ್ 2023, 16:22 IST
Last Updated 23 ನವೆಂಬರ್ 2023, 16:22 IST
<div class="paragraphs"><p>ನಿರ್ಮಾಣ ಹಂತದ ಸುರಂಗ ಕುಸಿತ</p></div>

ನಿರ್ಮಾಣ ಹಂತದ ಸುರಂಗ ಕುಸಿತ

   

ಚಿತ್ರ ಕೃಪೆ–ಪಿಟಿಐ

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣೆಗೆ ನಡೆಯುತ್ತಿರುವ ಕಾರ್ಯಾಚರಣೆ ಗುರುವಾರ ನಿರ್ಣಾಯಕ ಘಟ್ಟ ತಲುಪಿತ್ತು. ಆದರೆ, ಕೊರೆಯುವ ಯಂತ್ರವನ್ನು ಇರಿಸಿರುವ ಜಾಗದಲ್ಲಿ ರಾತ್ರಿಯ ವೇಳೆಗೆ ಬಿರುಕು ಉಂಟಾದ ಕಾರಣದಿಂದಾಗಿ ಇಡೀ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು. 

ADVERTISEMENT

ಸುರಂಗ ಕೊರೆಯುವುದನ್ನು ಪುನರಾರಂಭಿಸುವ ಮೊದಲು 25 ಟನ್ ತೂಕದ ಕೊರೆಯುವ ಯಂತ್ರ ಇರುವ ಜಾಗವನ್ನು ದುರಸ್ತಿಪಡಿಸಲಾಗುವುದು ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

‘ಕೊರೆಯುವ ಯಂತ್ರವು ಮೂರನೇ ಬಾರಿಗೆ ಕೆಲವು ಸಮಸ್ಯೆ ಎದುರಿಸುತ್ತಿದೆ. ಎಚ್ಚರಿಕೆಯಿಂದ ಕೆಲಸ ನಡೆಯುತ್ತಿದೆ. ಅವಸರದಲ್ಲಿ ಕೆಲಸ ಮಾಡಿದರೆ, ಕೆಲಸವು ಸಂಕೀರ್ಣಗೊಳ್ಳಬಹುದು’ ಎಂದು ಸುರಂಗ ವಿಷಯಗಳ ತಜ್ಞ ಅರ್ನಾಲ್ಡ್‌ ಡಿಕ್ಸ್‌ ತಿಳಿಸಿದರು. 

ಕೊರೆಯುವ ಯಂತ್ರಕ್ಕೆ ಬುಧವಾರ ರಾತ್ರಿ ಕಬ್ಬಿಣದ ಮೆಶ್‌ ಅಡ್ಡಿ ಬಂದು ಕಾರ್ಯಾಚರಣೆ ಆರು ತಾಸು ಸ್ಥಗಿತಗೊಂಡಿತು. ಅದನ್ನು ತೆರವುಗೊಳಿಸಿದ ಬಳಿಕ ಗುರುವಾರ ಬೆಳಿಗ್ಗೆ ಮತ್ತೆ ಕೆಲಸ ಆರಂಭಗೊಂಡಿತು. 

‘ಮತ್ತೆ ಯಾವುದೇ ಅಡೆತಡೆ ಎದುರಾಗದಿದ್ದರೆ ಕಾರ್ಮಿಕರು ಶುಕ್ರವಾರ ಬೆಳಿಗ್ಗೆ ಹೊರಬರುವ ನಿರೀಕ್ಷೆ ಇದೆ’ ಎಂದು ಅಧಿಕಾರಿಗಳು  ಗುರುವಾರ ರಾತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾರ್ಮಿಕರ ರಕ್ಷಣೆಗಾಗಿ ಹಗಲು–ರಾತ್ರಿ ನಡೆಯುತ್ತಿರುವ ಕಾರ್ಯಾಚರಣೆ 12ನೇ ದಿನ ಪ್ರವೇಶಿಸಿದೆ.

ಈ ನಡುವೆ ಕಾರ್ಮಿಕರ ಜೊತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿದ್ದಾರೆ. ಶೀಘ್ರ ಸುರಕ್ಷಿತವಾಗಿ ಹೊರಗೆ ಕರೆಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

60 ಮೀ.ವರೆಗೂ ವಿಸ್ತರಣೆ: 

ರಂಧ್ರ ಕೊರೆಯುತ್ತ ಸಾಗಿದಂತೆಲ್ಲ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಒಮ್ಮೆ ಒಂದು ಪೈಪ್ ಅಳವಡಿಸಿ ಬಳಿಕ ಮತ್ತೊಂದನ್ನು ಅದಕ್ಕೆ ವೆಲ್ಡ್ ಮಾಡಲಾಗುತ್ತದೆ. ಪೈಪನ್ನು ಒಟ್ಟು 60 ಮೀಟರ್‌ ವರೆಗೂ ವಿಸ್ತರಿಸಲಾಗುವುದು. ಈ ರೀತಿ ಕಾರ್ಮಿಕರನ್ನು ಹೊರತರುವ ಮಾರ್ಗವನ್ನು ಸಿದ್ಧಪಡಿಸಲಾಗುತ್ತಿದೆ ಎಂದರು. 

ಕಾರ್ಮಿಕರಿಗೆ ಪೈಪ್‌ ಮೂಲಕ ರೊಟ್ಟಿ, ಪಲ್ಯ, ಕಿತ್ತಳೆ, ಬಾಳೆಹಣ್ಣು, ಔಷಧಿಗಳು, ಶರ್ಟ್‌ಗಳು, ಒಳ ಉಡುಪುಗಳು, ಸಾಬೂನು ನೀಡಲಾಗುತ್ತಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತ್ತಾ ಹಸ್ನೈನ್, ‘ಶುಕ್ರವಾರದ ವೇಳೆಗೆ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗುತ್ತೇವೆ ಎಂದು ನಿರೀಕ್ಷಿಸುತ್ತೇನೆ. ಅಡ್ಡವಾಗಿ ಸುರಂಗ ಕೊರೆಯುವಾಗ ರಕ್ಷಣಾ ಸಿಬ್ಬಂದಿ ಇನ್ನೂ 3–4 ಅಡತಡೆ ಎದುರಿಸುವ ಸಾಧ್ಯತೆ ಇದೆ. ಕಾರ್ಯಾಚರಣೆ ಸಮಯದ ಬಗ್ಗೆ ಊಹೆ ಮಾಡುವುದು ನ್ಯಾಯವಲ್ಲ. ಏಕೆಂದರೆ ಇದು ಯುದ್ಧದಂತೆಯೇ ಇರುತ್ತದೆ’ ಎಂದು ತಿಳಿಸಿದರು.

ಸ್ಥಳದಲ್ಲಿ 41 ಆಂಬುಲೆನ್ಸ್‌ಗಳು ಸನ್ನದ್ದ ಸ್ಥಿತಿಯಲ್ಲಿವೆ. ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿದ್ದರೆ ಅವರನ್ನು ಏರ್‌ಲಿಫ್ಟ್‌ ಮಾಡಲು ವ್ಯವಸ್ಥೆ ಮಾಡಲಾಗಿದೆ. 

ಕಾರ್ಮಿಕರನ್ನು ರಕ್ಷಿಸಲು ಸರ್ಕಾರ ಐದು ಆಯ್ಕೆಗಳ ಕ್ರಿಯಾ ಯೋಜನೆ ಕೈಗೊಂಡಿದೆ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮ, ಸಟ್ಲುಜ್ ಜಲ ವಿದ್ಯುತ್ ನಿಗಮ, ರೈಲ್ವೆ ವಿಕಾಸ್ ನಿಗಮ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ತೆಹ್ರಿ ಜಲ ಅಭಿವೃದ್ಧಿ ನಿಗಮ ಎಂಬ ಐದು ಏಜೆನ್ಸಿಗಳಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಿದೆ. 

ಕಾರ್ಮಿಕರ ಹೊರತರಲು ವೀಲ್‌ ಸ್ಟ್ರೆಚರ್‌

‘ದೊಡ್ಡ ಪೈಪ್‌ಗಳ ಮೂಲಕ ವೀಲ್ ಸ್ಟ್ರೆಚರ್‌ಗಳಲ್ಲಿ ಕಾರ್ಮಿಕರನ್ನು ಹೊರಗೆ ತರಲಾಗುವುದು. 800 ಮಿಲಿ ಮೀಟರ್ ವ್ಯಾಸದ ಪೈಪ್‌ಗಳ ಮೂಲಕ ಕಾರ್ಮಿಕರು ಒಬ್ಬೊಬ್ಬರಾಗಿ ತೆವಳಿಕೊಂಡು ಹೊರ ಬರುವ ಆಯ್ಕೆಯನ್ನು ರಕ್ಷಣಾ ಸಿಬ್ಬಂದಿ ಪರಿಗಣಿಸಿದ್ದರು. ಆದರೆ, ಸೂರ್ಯನ ಬೆಳಕು ಮತ್ತು ಸರಿಯಾದ ಊಟವಿಲ್ಲದೆ ಸುರಂಗದಲ್ಲಿ 12 ದಿನ ಕಳೆದಿದ್ದು, ನಿಶ್ಯಕ್ತರಾಗಿರುವುದರಿಂದ ಕಾರ್ಮಿಕರು ತೆವಳಿಕೊಂಡು ಹೊರಬರುವುದು ಕಷ್ಟ’ ಎಂದು ಎನ್‌ಡಿಆರ್‌ಎಫ್‌ ಮಹಾನಿರ್ದೇಶಕ ಅತುಲ್ ಕರ್ವಾಲ್ ಹೇಳಿದರು.

ಪೈಪ್ ಮೂಲಕ ಎನ್‌ಡಿಆರ್‌ಎಫ್ ಸಿಬ್ಬಂದಿ ನಿಗದಿತ ಸ್ಥಳ ತಲುಪಿದಾಗ ಸ್ಟ್ರೆಚರ್‌ಗಳನ್ನು ಬಳಸಿ ಕಾರ್ಮಿಕರನ್ನು ಒಬ್ಬೊಬ್ಬರಾಗಿ ಕಳುಹಿಸುತ್ತಾರೆ. ಸಿಬ್ಬಂದಿ ಸ್ಟ್ರೆಚರ್ ಅನ್ನು ಹಗ್ಗದಿಂದ ಎಳೆಯುವ ವೇಳೆ ವೆಲ್ಡಿಂಗ್ ಮಾಡಿದ ಪೈಪ್‌ಗಳು ತಗುಲಿ ಗಾಯವಾಗುವುದನ್ನು ತಪ್ಪಿಸಲು ಪ್ರತಿಯೊಬ್ಬ ಕಾರ್ಮಿಕರನ್ನು ಸ್ಟ್ರೆಚರ್ ಮೇಲೆ ಮಲಗುವಂತೆ ಮಾಡಲಾಗುವುದು ಎಂದು ತಿಳಿಸಿದರು. 

‘‌800 ಮಿಲಿ ಮೀಟರ್‌ ವ್ಯಾಸದ ಪೈಪ್ ಅನ್ನು ರಕ್ಷಣಾ ಸಿಬ್ಬಂದಿ ಸ್ವಚ್ಛಗೊಳಿಸಲಿದ್ದು, ಸ್ಟ್ರೆಚರ್‌ಗಳ ಚಲನೆಗೆ ಯಾವುದೇ ಅಡ್ಡಿ ಇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು. ಪೈಪ್‌ಗಳು ಸುಮಾರು 32 ಇಂಚು ಅಗಲವಾಗಿವೆ. 22-24 ಇಂಚುಗಳಷ್ಟು ಅಗಲವಿದ್ದರೂ ಅವುಗಳ ಮೂಲಕ ಕಾರ್ಮಿಕರನ್ನು ಹೊರಗೆ ತರಬಹುದು’ ಎಂದು ಕರ್ವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.