ADVERTISEMENT

ಪಶ್ಚಿಮ ಬಂಗಾಳಕ್ಕೆ ಪ್ರತಿ ತಿಂಗಳು ಅಮಿತ್‌ ಶಾ, ನಡ್ಡಾ ಭೇಟಿ

ವಿಧಾನಸಭೆ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ: ಐದು ವಲಯಗಳಿಗೆ ಉಸ್ತುವಾರಿಗಳ ನೇಮಕ

ಪಿಟಿಐ
Published 18 ನವೆಂಬರ್ 2020, 10:49 IST
Last Updated 18 ನವೆಂಬರ್ 2020, 10:49 IST
.
.   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ, ಭರದಿಂದ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.

ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರತಿ ತಿಂಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ತಿಳಿಸಿದ್ದಾರೆ.

ಇಬ್ಬರು ಹಿರಿಯ ನಾಯಕರು ಪ್ರತ್ಯೇಕವಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಪಕ್ಷದ ಸಂಘಟನೆ ಕುರಿತು ಪರಾಮರ್ಶಿಸಲಿದ್ದಾರೆ. ಇದರಿಂದ, ಪಕ್ಷದ ಕಾರ್ಯಕರ್ತರಲ್ಲೂ ಉತ್ಸಾಹ ಮೂಡುತ್ತದೆ ಎಂದು ಘೋಷ್‌ ತಿಳಿಸಿದ್ದಾರೆ.

ADVERTISEMENT

294 ಸದಸ್ಯರನ್ನು ಹೊಂದಿರುವ ವಿಧಾನಸಭೆಗೆ ಮುಂದಿನ ವರ್ಷದ ಏಪ್ರಿಲ್‌ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ, ಬಿಜೆಪಿ ರಾಜ್ಯವನ್ನು ಐದು ಸಂಘಟನಾ ವಲಯಗಳನ್ನು ಮಾಡಿದ್ದು, ಪ್ರತಿಯೊಂದು ವಲಯಕ್ಕೂ ಕೇಂದ್ರೀಯ ನಾಯಕರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಲಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ 18 ಸ್ಥಾನಗಳಲ್ಲಿ ಜಯಗಳಿಸಿತ್ತು. ಹೀಗಾಗಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ಬಿಜೆಪಿಯಿಂದ ಸುರಕ್ಷಿತವಾಗಿರಿ: ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್‌ ಡಿಜಿಟಲ್‌ ಪ್ರಚಾರ ಆರಂಭಿಸಿದೆ. ‘ಬಿಜೆಪಿಯಿಂದ ನೀವು ಸುರಕ್ಷಿತ ಅಂತರದಲ್ಲಿರಿ’ ಎನ್ನುವ ಡಿಜಿಟಲ್‌ ಪ್ರಚಾರ ಕೈಗೊಂಡಿದ್ದು, 10 ಲಕ್ಷ ಮಂದಿಯನ್ನು ತಲುಪಿದೆ. ಅಕ್ಟೋಬರ್‌ 23ರಿಂದ ಈ ಪ‍್ರಚಾರ ಕಾರ್ಯ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.