ADVERTISEMENT

ಶಾಹೀನ್ ಬಾಗ್ ಮಹಿಳೆಯರಿಗೆ ಹಣ ನೀಡಿದ್ದು ಸುಳ್ಳು: ವರದಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:45 IST
Last Updated 3 ಮಾರ್ಚ್ 2020, 19:45 IST
1. ಬಾಬು ನಗರದ ಗಲ್ಲಿಯಲ್ಲಿ ಹಣ ಹಂಚಲಾದ ವಿಡಿಯೊ ಸ್ಕ್ರೀನ್‌ ಗ್ರ್ಯಾಬ್‌. 2. ಚಂದ್ರ ಮೋಹನ್ ವರದಿ ಮಾಡುತ್ತಿರುವ ಬಾಬು ನಗರದ ಗಲ್ಲಿಯ ವಿಡಿಯೊ ಸ್ಕ್ರೀನ್‌ ಗ್ರ್ಯಾಬ್‌            ಎರಡೂ ವಿಡಿಯೊದಲ್ಲಿ ಇರುವ ಸ್ಥಳ ಒಂದೇ ಎಂಬುದನ್ನು ಸ್ಪಷ್ಟಪಡಿಸುವ ಅಂಶಗಳನ್ನು ಹಸಿರು, ನೀಲಿ, ಕೆಂಪು ಬಣ್ಣಗಳಲ್ಲಿ ಗುರುತು ಮಾಡಲಾಗಿದೆ
1. ಬಾಬು ನಗರದ ಗಲ್ಲಿಯಲ್ಲಿ ಹಣ ಹಂಚಲಾದ ವಿಡಿಯೊ ಸ್ಕ್ರೀನ್‌ ಗ್ರ್ಯಾಬ್‌. 2. ಚಂದ್ರ ಮೋಹನ್ ವರದಿ ಮಾಡುತ್ತಿರುವ ಬಾಬು ನಗರದ ಗಲ್ಲಿಯ ವಿಡಿಯೊ ಸ್ಕ್ರೀನ್‌ ಗ್ರ್ಯಾಬ್‌ ಎರಡೂ ವಿಡಿಯೊದಲ್ಲಿ ಇರುವ ಸ್ಥಳ ಒಂದೇ ಎಂಬುದನ್ನು ಸ್ಪಷ್ಟಪಡಿಸುವ ಅಂಶಗಳನ್ನು ಹಸಿರು, ನೀಲಿ, ಕೆಂಪು ಬಣ್ಣಗಳಲ್ಲಿ ಗುರುತು ಮಾಡಲಾಗಿದೆ   

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಹಣ ಹಂಚಲಾಗುತ್ತಿದೆ ಎಂಬ ಆರೋಪವಿದೆ. ಇದನ್ನು ಪುಷ್ಟೀಕರಿಸುವಂತೆ, ಸಾಲು ಸಾಲು ಮುಸ್ಲಿಂ ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೊವನ್ನು ‘ವಿ ಸಪೋರ್ಟ್‌ ನರೇಂದ್ರ ಮೋದಿ’ ಫೇಸ್‌ಬುಕ್ ಪುಟದ ಮೂಲಕ ಪ್ರಕಟಿಸಲಾಗಿದೆ. ಈ ವಿಡಿಯೊ ವೈರಲ್ ಕೂಡ ಆಗಿದೆ. ‘ಆದರೆ ಈ ವಿಡಿಯೊಗೂ, ಶಾಹೀನ್ ಬಾಗ್ ಪ್ರತಿಭಟನೆಗೂ ಸಂಬಂಧವಿಲ್ಲ.
ವೈರಲ್‌ ಆಗಿರುವ ವಿಡಿಯೊ ಬೇರೆಯದ್ದು’ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.

ಮುಸ್ಲಿಂ ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ದೆಹಲಿ ಬಿಜೆಪಿಯ ಹಲವು ಮುಖಂಡರು ಈ ವಿಡಿಯೊವನ್ನು ಹಂಚಿಕೊಂಡಿದ್ದರು. ಅವರ ಅನುಯಾಯಿಗಳು ‘ಈ ಮಹಿಳೆಯರನ್ನು ಕೊಲ್ಲಿ’ ಎಂದೂ ಕರೆ ನೀಡಿದ್ದರು.

ಚಂದ್ರ ಮೋಹನ್ ಎಂಬ ಸಾಮಾಜಿಕ ಕಾರ್ಯಕರ್ತವಿಡಿಯೊದಲ್ಲಿ ಇರುವ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ನಡೆದದ್ದು ಏನು ಎಂಬ ಸತ್ಯವನ್ನು ಪರಿಶೀಲಿಸಿದ್ದಾರೆ. ಇದು ದೆಹಲಿಯ ಬಾಬು ನಗರದ ಎ ಬ್ಲಾಕ್‌ನ 9ನೇ ಅಡ್ಡರಸ್ತೆ. ದೆಹಲಿ ಹಿಂಸಾಚಾರದ ವೇಳೆ ಶಿವ ವಿಹಾರ ಪ್ರದೇಶದಲ್ಲಿ ಸಂತ್ರಸ್ತ
ರಾದವರಲ್ಲಿ ಹಲವು ಮುಸ್ಲಿಮರು ಆ ಜಾಗವನ್ನು ತೊರೆದಿದ್ದಾರೆ. ಅವರಲ್ಲಿ ಹಲವರು ಈ ಬಾಬುನಗರಕ್ಕೆ ಬಂದಿದ್ದಾರೆ. ಇಲ್ಲಿನ ಜನರು, ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಮಾಡಿದ್ದಾರೆ. ಸಂತ್ರಸ್ತರಾದವರಲ್ಲಿ ಅಗತ್ಯವಿದ್ದವರಿಗೆ ಬಾಬುನಗರದ ವ್ಯಕ್ತಿಯೊಬ್ಬರು ಹಣ ನೀಡಿದ್ದಾರೆ’ ಎಂದು ಚಂದ್ರ ಮೋಹನ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೊವನ್ನೂ
ಪ್ರಕಟಿಸಿದ್ದಾರೆ.

ADVERTISEMENT

ಬಾಬುನಗರಕ್ಕೆ ವಲಸೆ ಬಂದ ಸಂತ್ರಸ್ತ ಮಹಿಳೆಯರಿಗೆ ಸ್ಥಳೀಯ ನಿವಾಸಿ ಶಹಜಾದ್ ಮಲಿಕ್ ನೆರವು ನೀಡಿದ್ದಾರೆ. ಆರಂಭದಲ್ಲಿ ಮಲಿಕ್ ಅವರು ಹಲವು ಮಹಿಳೆಯರಿಗೆ ದಿನಸಿ ವಿತರಿಸಿದ್ದಾರೆ. ದಿನಸಿ ಖಾಲಿಯಾದ ನಂತರ ಅಗತ್ಯವಿದ್ದ ಮಹಿಳೆಯರಿಗೆ ಹಣ ನೀಡಿದ್ದಾರೆ ಎಂದು ಚಂದ್ರ ಮೋಹನ್ ಹೇಳಿದ್ದಾರೆ. ಸಹಜಾದ್ ಮಲಿಕ್ ಅವರನ್ನೂ ಮಾತನಾಡಿಸಿ ವಿಡಿಯೊ ಮಾಡಿದ್ದಾರೆ.

‘100–150 ಮಹಿಳೆಯರು ಇದ್ದರು. ದಿನಸಿ ಮುಗಿದ ನಂತರ ಅವರಲ್ಲಿ ಕೆಲವರಿಗೆ ₹500 ಹಣ ನೀಡಿದ್ದೇನೆ. ಕಷ್ಟದಲ್ಲಿ ಇದ್ದವರಿಗೆ ನೆರವು ನಿಡಿದ್ದೇನೆ. ಇದಕ್ಕೆ ಸಂಬಂಧಿಸಿದ 3 ನಿಮಿಷದ ವಿಡಿಯೊವನ್ನು ನನ್ನ ಗೆಳೆಯರು ಸಾಮಾಜಿಕ ಜಾಲತಾಣ
ಗಳಲ್ಲಿ ಹಾಕಿದ್ದರು. ಅದರಲ್ಲಿ ಕೇವಲ 30 ಸೆಕೆಂಡ್‌ಗಳ ವಿಡಿಯೊ ವೈರಲ್ ಮಾಡಿ, ಸುಳ್ಳು ಸುದ್ದಿ ಮಾಡಲಾಗಿದೆ’ ಎಂದು ಮಲಿಕ್ ಸ್ಪಷ್ಟಪಡಿಸಿದ್ದಾರೆ.

3 ನಿಮಿಷಗಳ ವಿಡಿಯೊವನ್ನೂ ಆಲ್ಟ್‌ನ್ಯೂಸ್ ಪ್ರಕಟಿಸಿದೆ. ಮಹಿಳೆಯರು ದಿನಸಿ ಪಡೆದುಕೊಳ್ಳುತ್ತಿರುವುದು, ಶಹಜಾದ್ ಹಣ ನೀಡುತ್ತಿರುವುದು ಆ ವಿಡಿಯೊದಲ್ಲಿ ಇದೆ. ‘ಯಾರಿಗೆ ತೀರಾ ಅಗತ್ಯವಿದೆಯೋ ಅವರು ಮಾತ್ರ ಹಣ ಪಡೆದುಕೊಳ್ಳಿ’ ಎಂದು ಶಹಜಾದ್ ಹೇಳುತ್ತಿರುವುದೂ ವಿಡಿಯೊದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.