ADVERTISEMENT

ಶಕ್ಸ್‌ಗಾಮ್‌ ಮಾತ್ರವಲ್ಲ, ಪಿಒಕೆಯೂ ನಮ್ಮದೇ: ಲೆ.ಗವರ್ನರ್‌ ಕವಿಂದರ್ ಗುಪ್ತಾ

ಚೀನಾದ ಪ್ರತಿಪಾದನೆಗೆ ತಿರುಗೇಟು ನೀಡಿದ ಭಾರತ

ಪಿಟಿಐ
Published 13 ಜನವರಿ 2026, 14:03 IST
Last Updated 13 ಜನವರಿ 2026, 14:03 IST
<div class="paragraphs"><p>ಭಾರತ–ಪಾಕಿಸ್ತಾನ</p></div>

ಭಾರತ–ಪಾಕಿಸ್ತಾನ

   

– ಗೆಟ್ಟಿ ಚಿತ್ರ

ಜಮ್ಮು: ಶಕ್ಸ್‌ಗಾಮ್ ಕಣಿವೆಯು ತನ್ನ ಭೂಭಾಗವಾಗಿದೆ ಎಂಬ ಚೀನಾ ದೇಶದ ವಾದವನ್ನು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್‌ ಕವಿಂದರ್ ಗುಪ್ತಾ ಬಲವಾಗಿ ತಿರಸ್ಕರಿಸಿದ್ದಾರೆ.

ADVERTISEMENT

ಶಕ್ಸ್‌ಗಾಮ್ ಕಣಿವೆ ತನ್ನ ಭೂಭಾಗವಾಗಿದೆ ಎಂದು ಸೋಮವಾರ ಚೀನಾ ಪ್ರತಿಪಾದಿಸಿದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಪಾಕ್ ಆಕ್ರಮಿತ ಕಾಶ್ಮೀರದ(ಪಿಒಕೆ) ಅಷ್ಟೂ ಪ್ರದೇಶ ಕೂಡ ಭಾರತಕ್ಕೆ ಸೇರಿದೆ’ ಎಂದು ಪ್ರಪಾದಿಸಿದರು.

‘ಈ ಪ್ರದೇಶದಲ್ಲಿ ಯಾರೇ ಭೂ ವಿಸ್ತರಣೆ ಮಾಡುವ ಪ್ರಯತ್ನವನ್ನು ಸಹಿಸಲಾಗುವುದಿಲ್ಲ’ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ‘ಶಕ್ಸ್‌ಗಾವ್‌ ಪ್ರದೇಶದಲ್ಲಿ ಚೀನಾ ಕೈಗೊಂಡಿರುವ ಮೂಲಸೌಕರ್ಯ ಯೋಜನೆಗಳು ಖಂಡನೀಯ’ ಎಂದು ಒತ್ತಿ ಹೇಳಿದರು.

‘ಇಡೀ ಕಾಶ್ಮೀರವೇ(ಪಿಒಕೆ) ನಮ್ಮದು. ಪಾಕಿಸ್ತಾನವು ಚೀನಾದೊಂದಿಗೆ ಯಾವ ರೀತಿಯ ವ್ಯವಹಾರ ನಡೆಸಿದೆ ಎಂದು ನಮಗೆ ಗೊತ್ತಿಲ್ಲ. ಇಂಥ ವಿಸ್ತರಣಾವಾದಿ ನೀತಿಯಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂಬುದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು’ ಎಂದು ಕವಿಂದರ್‌ ತಿಳಿಸಿದರು.

‘ಇಂಥವನ್ನು ಎದುರಿಸಲು ಭಾರತ ಸಮರ್ಥವಾಗಿದೆ. ಇದು 1962ರ ಭಾರತವಲ್ಲ, 2026ರ ಭಾರತ. ಇಂತಹ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸುತ್ತೇವೆ. ಇದನ್ನೆಲ್ಲ ವಿದೇಶಾಂಗ ಸಚಿವಾಲಯ ಗಮನಿಸುತ್ತಿದೆ’ ಎಂದು ಅವರು ಎಚ್ಚರಿಸಿದರು.

‘ಚೀನಾ ಈ ಹಿಂದೆ ಅರುಣಾಚಲ ಪ್ರದೇಶದ ಕೆಲವು ಭಾಗಗಳ ಮೇಲೆ ಹಕ್ಕು ಸಾಧಿಸಿತ್ತು. ಇನ್ನು ಇಂಥ ಯಾವುದೇ ಕೃತ್ಯವನ್ನು ನಾವು ಸಹಿಸುವುದಿಲ್ಲ. ಭಾರತ ಹಿಂದೆ ಇದ್ದುದಕ್ಕಿಂತ ಈಗ ಬಹಳ ಬಲಿಷ್ಠವಾಗಿದೆ ಎಂಬುದನ್ನು ಚೀನಾ ಅರಿತುಕೊಳ್ಳಬೇಕು’ ಎಂದು ಗುಪ್ತಾ ಹೇಳಿದರು.

ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಗುಪ್ತಾ ಅವರು, ‘ಪಾಕಿಸ್ತಾನ ಮಾರಾಟಕ್ಕಿರುವ ದೇಶವಾಗಿದೆ. ತನ್ನ ಸಾರ್ವಭೌಮತ್ವ ಅಥವಾ ತನ್ನ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲದ ರಾಷ್ಟ್ರವಾಗಿದೆ. ಬಲೂಚಿಸ್ತಾನ, ಸಿಂಧ್ ಮತ್ತು ಕರಾಚಿಯಲ್ಲಿ, ಪಾಕ್‌ ಸೇನೆಯಿಂದ ದೌರ್ಜನ್ಯ ನಡೆಯುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ.ಆ ಎಲ್ಲ ಪ್ರದೇಶಗಳನ್ನು ಪರೋಕ್ಷವಾಗಿ ಸೇನೆಯೇ ನಡೆಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.