
ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರದ್ ಪವಾರ್ ಹಾಗೂ ಗೌತಮ್ ಅದಾನಿ ಚರ್ಚೆ ನಡೆಸಿದರು
–ಪಿಟಿಐ ಚಿತ್ರ
ಮುಂಬೈ: ‘ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಬೆಳವಣಿಗೆಯು ಎಲ್ಲರಿಗೂ ಸ್ಫೂರ್ತಿದಾಯಕ’ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಬಣ್ಣಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅದಾನಿ ಅವರು, ‘ಹಿರಿಯ ನಾಯಕ ಪವಾರ್ ಎಲ್ಲರಿಗೂ ಮಾರ್ಗದರ್ಶಕ’ ಎಂದು ಹೊಗಳಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅದಾನಿ ವಿರುದ್ಧ ಆಕ್ರಮಣಕಾರಿ ದಾಳಿ ಮುಂದುವರಿಸುತ್ತಿರುವಾಗ, ಈ ಆತ್ಮೀಯ ಮಾತುಕತೆಯು ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ.
ಕಾಂಗ್ರೆಸ್ ಹಾಗೂ ಎನ್‌ಸಿಪಿ (ಎಸ್‌ಪಿ) ನಡುವಿನ ಸಂಭಾವ್ಯ ಹೊಂದಾಣಿಕೆಯ ಬಗ್ಗೆ ಅನೇಕ ಊಹಾಪೋಹಗಳಿದ್ದು, ಈಗಿನ ಬೆಳವಣಿಗೆಯು ಮಹಾರಾಷ್ಟ್ರದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ಪವಾರ್ ಸ್ಥಾಪಿಸಿದ್ದ ವಿದ್ಯಾ ಪ್ರತಿಷ್ಠಾನದ ಭಾಗವಾದ ‘ಶರದ್ ಪವಾರ್ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‘ನ ಹೊಸ ಸಂಕೀರ್ಣವನ್ನು ಉದ್ಘಾಟಿಸಲು ಅದಾನಿ ಅವರು ಪುಣೆ ಜಿಲ್ಲೆಯ ಬಾರಾಮತಿಗೆ ಭಾನುವಾರ ಭೇಟಿ ನೀಡಿದ್ದರು.
‘ಗುಜರಾತ್‌ನ ಬರಪೀಡಿತ ಬನಸ್ಕಂತ ಜಿಲ್ಲೆಯವರಾದ ಅದಾನಿ ಅವರು ಇಂದು 23 ರಾಜ್ಯಗಳಲ್ಲಿ ವಿಶಾಲವಾದ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಅವರ ಈ ಪ್ರಯಾಣವು ದೊಡ್ಡ ಕನಸು ಕಾಣುವ ಯುವಕರಿಗೆ ಸ್ಫೂರ್ತಿಯಾಗಿದೆ’ ಎಂದು ಪವಾರ್ ಬಣ್ಣಿಸಿದ್ದಾರೆ.
ಗೌತಮ್ ಅದಾನಿ ಮಾತನಾಡಿ, ‘ಪವಾರ್ ಅವರೊಂದಿಗಿನ ಮೂರು ದಶಕಗಳ ಒಡನಾಟವು ನನ್ನ ಚಿಂತನೆಯನ್ನು ರೂಪಿಸಿದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರು ನಿಜವಾದ ಅರ್ಥದಲ್ಲಿ ಮಾರ್ಗದರ್ಶಕರಾಗಿದ್ದಾರೆ’ ಎಂದು ಹೊಗಳಿದ್ದಾರೆ.
ಅದಾನಿ ಮತ್ತು ಪವಾರ್ ಕುಟುಂಬಗಳ ನಡುವೆ ಕಳೆದ 30 ವರ್ಷಗಳಿಂದ ಉತ್ತಮ ಸಂಬಂಧವಿದೆ. ಅವರು ನನಗೆ ಅಣ್ಣನಂತೆ ಅವರ ಪತ್ನಿ ಪ್ರೀತಿ ಅದಾನಿ ಅವರು ಅತ್ತಿಗೆ ಇದ್ದಂತೆಸುಪ್ರಿಯಾ ಸುಳೆ ಬಾರಾಮತಿ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.