ದೆಹಲಿ ಹೈಕೋರ್ಟ್
ನವದೆಹಲಿ: ಯೋಗ ಗುರು ಬಾಬಾ ರಾಮದೇವ ಅವರು ‘ಯಾರ ನಿಯಂತ್ರಣದಲ್ಲಿಯೂ ಇಲ್ಲ, ಅವರು ತಮ್ಮದೇ ಜಗತ್ತಿನಲ್ಲಿ ಇರುವಂತಿದೆ’ ಎಂದು ಹೇಳಿರುವ ದೆಹಲಿ ಹೈಕೋರ್ಟ್, ಹಮ್‌ದರ್ದ್ ಕಂಪನಿಯ ‘ರೂಹ್ ಅಫ್ಜಾ’ ಪಾನೀಯ ಉದ್ದೇಶಿಸಿ ರಾಮದೇವ ಅವರು ‘ಶರಬತ್ ಜಿಹಾದ್’ ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆಯಂತೆ ಕಾಣುತ್ತಿದೆ ಎಂದು ಹೇಳಿದೆ.
ಹಮ್‌ದರ್ದ್ ಕಂಪನಿಯ ಯಾವುದೇ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಬಾರದು, ವಿಡಿಯೊ ಹಂಚಿಕೊಳ್ಳಬಾರದು ಎಂದು ನ್ಯಾಯಾಲಯವು ಈ ಹಿಂದೆ ರಾಮದೇವ ಅವರಿಗೆ ಆದೇಶ ನೀಡಿತ್ತು.
‘ಹಿಂದಿನ ಆದೇಶದ ಹಿನ್ನೆಲೆಯಲ್ಲಿ ಗಮನಿಸಿದಾಗ, ಅವರ ಪ್ರಮಾಣಪತ್ರ ಹಾಗೂ ವಿಡಿಯೊ ನ್ಯಾಯಾಂಗ ನಿಂದನೆಯಂತೆ ಇದೆ ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ನಾನು ಈಗ ನ್ಯಾಯಾಂಗ ನಿಂದನೆ ನೋಟಿಸ್ ಹೊರಡಿಸಲಿದ್ದೇನೆ. ನಾವು ಅವರನ್ನು ಇಲ್ಲಿಗೆ ಬರಹೇಳಲಿದ್ದೇವೆ’ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಲ್ ಹೇಳಿದರು.
ಏಪ್ರಿಲ್ 22ರಂದು ಕೋರ್ಟ್ ಆದೇಶ ನೀಡಿದ ನಂತರವೂ ರಾಮದೇವ ಅವರು ಆಕ್ಷೇಪಾರ್ಹವಾದ ವಿಡಿಯೊ ಒಂದನ್ನು ಪ್ರಕಟಿಸಿದ್ದಾರೆ ಎಂಬ ಸಂಗತಿಯನ್ನು ಪೀಠದ ಗಮನಕ್ಕೆ ತಂದ ಬಳಿಕ ನ್ಯಾಯಮೂರ್ತಿ ಈ ಮಾತು ಹೇಳಿದರು.
ವಾದ ಮಂಡಿಸಬೇಕಿರುವ ವಕೀಲರು ಲಭ್ಯರಿಲ್ಲದ ಕಾರಣಕ್ಕೆ ಪ್ರಕರಣವನ್ನು ನಂತರ ಕೈಗೆತ್ತಿಕೊಳ್ಳಬೇಕು ಎಂದು ರಾಮದೇವ ಪರ ವಕೀಲರು ಮನವಿ ಮಾಡಿದರು. ಹೀಗಾಗಿ, ವಿಚಾರಣೆಯನ್ನು ಮುಂದೂಡಲಾಯಿತು.
ವಿವಾದಾತ್ಮಕ ಹೇಳಿಕೆಯ ಕಾರಣಕ್ಕಾಗಿ ಹಮ್‌ದರ್ದ್ ನ್ಯಾಷನಲ್ ಫೌಂಡೇಷನ್ ಇಂಡಿಯಾ ಸಂಸ್ಥೆಯು ರಾಮದೇವ ಮತ್ತು ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ವಿರುದ್ಧ ಅರ್ಜಿ ಸಲ್ಲಿಸಿದೆ.
ಹಮ್‌ದರ್ದ್ ಕಂಪನಿಯ ‘ರೂಹ್ ಅಫ್ಜಾ’ ಪಾನೀಯದ ಬಗ್ಗೆ ರಾಮದೇವ ಅವರು ‘ಶರಬತ್ ಜಿಹಾದ್’ ಎಂದು ಹೇಳಿದ್ದು ತನ್ನ ಆತ್ಮಸಾಕ್ಷಿಯನ್ನು ಕಲಕಿದೆ ಎಂದು ನ್ಯಾಯಾಲಯ ಹಿಂದೆ ಹೇಳಿತ್ತು. ಈ ಹೇಳಿಕೆಗೆ ಸಮರ್ಥನೆ ಇಲ್ಲ ಎಂದೂ ಅದು ಹೇಳಿತ್ತು. ಆಗ ರಾಮದೇವ ಅವರು, ಸಂಬಂಧಪಟ್ಟ ವಿಡಿಯೊಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನು ತಕ್ಷಣವೇ ಅಳಿಸಿಹಾಕುವುದಾಗಿ ಭರವಸೆ ನೀಡಿದ್ದರು.
ಪತಂಜಲಿ ಕಂಪನಿಯ ‘ಗುಲಾಬ್ ಶರಬತ್’ ಬಗ್ಗೆ ಪ್ರಚಾರ ಮಾಡುವ ಸಂದರ್ಭದಲ್ಲಿ ರಾಮದೇವ ಅವರು, ಹಮ್‌ದರ್ದ್‌ನ ‘ರೂಹ್ ಅಫ್ಜಾ’ ಪಾನೀಯದಿಂದ ಸಿಗುವ ಹಣದಿಂದ ಮದರಸಾಗಳನ್ನು, ಮಸೀದಿಗಳನ್ನು ನಿರ್ಮಿಸಲಾಗುತ್ತದೆ ಎಂಬುದಾಗಿ ಆರೋಪಿಸಿದ್ದರು ಎಂದು ಹಮ್‌ದರ್ದ್ ಪರ ವಕೀಲರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.