ADVERTISEMENT

POK ಶಾರದಾ ಪೀಠದಲ್ಲಿ ಕಾಫಿ ಶಾಪ್‌ ತೆರೆದ ಪಾಕಿಸ್ತಾನ ಸೇನೆ: ತೆರವುಗೊಳಿಸಲು ಆಗ್ರಹ

ಪಿಟಿಐ
Published 29 ಡಿಸೆಂಬರ್ 2023, 11:15 IST
Last Updated 29 ಡಿಸೆಂಬರ್ 2023, 11:15 IST
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠ   

ಬೆಂಗಳೂರು: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ದೇಗುಲ ಮತ್ತು ಜಾಗವನ್ನು ಪಾಕಿಸ್ತಾನ ಸೇನೆಯು ಅತಿಕ್ರಮಿಸಿದ್ದು, ಅಲ್ಲಿ ಕಾಫಿ ಅಂಗಡಿ ತೆರೆದಿದೆ. ಇದನ್ನು ತೆರವುಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ’ ಎಂದು ಸೇವಾ ಶಾರದಾ ಸಮಿತಿ ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಮಾಹಿತಿ ನೀಡಿದ ಸಮಿತಿಯ ಸಂಸ್ಥಾಪಕ ರವೀಂದ್ರ ಪಂಡಿತ, ‘ಪಾಕಿಸ್ತಾನ ಸೇನೆಯು ಗುಡಿಯನ್ನು ಅತಿಕ್ರಮಿಸಿದ ನಂತರ ದೇಗುಲ ಶಿಥಿಲಗೊಂಡಿದೆ. ದೇಗುಲದ ಪರವಾಗಿ ನ್ಯಾಯಾಲಯದ ಆದೇಶವಿದ್ದರೂ, ಅದೇ ಜಾಗದಲ್ಲಿ ಕಾಫಿ ಅಂಗಡಿ ತೆರೆಯಲಾಗಿದೆ. ಇದನ್ನು ತೆರವುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಾಗಿದೆ’ ಎಂದರು.

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕಳೆದ ಜ. 3ರಂದು ಸೇವಾ ಶಾರದಾ ಸಮಿತಿ ಪರವಾಗಿ ತೀರ್ಪು ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ನಾಗರಿಕ ಸಮಿತಿಯೂ ಈ ಕುರಿತು ಧ್ವನಿ ಎತ್ತಿದೆ. ದೇಗುಲದ ಕಾಂಪೌಂಡ್‌ಗೆ ಹಾನಿ ಮಾಡಲಾಗಿದೆ. ಈ ಜಾಗವನ್ನು ತೆರವುಗೊಳಿಸಿ, ಮಂದಿರವನ್ನು ಸಮಿತಿಯ ವಶಕ್ಕೆ ನೀಡಬೇಕು. ದೇಗುಲದ ಜೀರ್ಣೋದ್ಧಾರ ನಡೆಸಿ, ದರ್ಶನಕ್ಕೆ ಮರಳಿ ತೆರೆಯಬೇಕಿದೆ’ ಎಂದರು.

ADVERTISEMENT

‘ಒಂದೊಮ್ಮೆ ಪಾಕಿಸ್ತಾನ ಸೇನೆ ಅಲ್ಲಿಂದ ಕಾಫಿ ಅಂಗಡಿ ತೆರವುಗೊಳಿಸದಿದ್ದರೆ, ಗಡಿ ನಿಯಂತ್ರಣ ರೇಖೆವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಭವಿಷ್ಯದಲ್ಲಿ ಶಾರದಾ ದೇಗುಲದ ಭಕ್ತರು ಈ ಜಾಥಾಕ್ಕಾಗಿ ಸಜ್ಜಾಗಬೇಕು. ಶಾರದಾ ಪೀಠವನ್ನು ಪಾರಂಪರಿಕ ತಾಣ ಎಂದು ಯುನೆಸ್ಕೊ ಘೋಷಿಸಬೇಕು’ ಎಂದು ರವೀಂದ್ರ ಪಂಡಿತ ಅವರು ಆಗ್ರಹಿಸಿದ್ದಾರೆ.

‘1947ಕ್ಕೂ ಪೂರ್ವದಲ್ಲಿ ತೀತ್ವಾಲ್‌ನಲ್ಲಿ ಶಾರದಾ ಪೀಠ ಮತ್ತು ಸಿಖರ ಗುರುದ್ವಾರ ನಿರ್ಮಿಸಲಾಗಿತ್ತು. ಆದರೆ ಗಲಭೆಯಲ್ಲಿ ಅದನ್ನು ಸುಡಲಾಗಿತ್ತು. ನಂತರ ಶೃಂಗೇರಿ ಶಾರದಾ ಮಠದ ನೆರವಿನೊಂದಿಗೆ ಭಾರತದ ಗಡಿ ನಿಯಂತ್ರಣ ರೇಖೆಯಲ್ಲಿ ಹೊಸ ದೇಗುಲ ಶಾರದಾ ಯಾತ್ರಾ ದೇವಸ್ಥಾನವನ್ನು ನಿರ್ಮಿಸಲಾಗಿತ್ತು. ಇದನ್ನು ಕಳೆದ ಮಾರ್ಚ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಮಾರ್ಚ್‌ನಿಂದ ಈಚೆಗೆ ಸುಮಾರು 10 ಸಾವಿರ ಜನ ಈ ದೇಗುಲ ಮತ್ತು ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.