ADVERTISEMENT

ಷರಿಯಾ ಕಾನೂನು ಬಯಸುವ ನಮಾಜವಾದಿಗಳಿಗೆ ದೇಶದಲ್ಲಿ ಜಾಗವಿಲ್ಲ: ಬಿಜೆಪಿ ಆಕ್ರೋಶ

ಪಿಟಿಐ
Published 1 ಜುಲೈ 2025, 16:07 IST
Last Updated 1 ಜುಲೈ 2025, 16:07 IST
ತೇಜಸ್ವಿ ಯಾದವ್
ತೇಜಸ್ವಿ ಯಾದವ್   

ನವದೆಹಲಿ: ‘ಬಿಹಾರದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ‘ಮೌಲಾನಾ‘ ತೇಜಸ್ವಿ ಯಾದವ್ ಅವರು ಕೋಮು ರಾಜಕೀಯದ ಮೂಲಕ ಸಮಾಜವನ್ನು ವಿಭಜಿಸುತ್ತಿದ್ದಾರೆ’ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ.

ಅಧಿಕಾರಕ್ಕೆ ಬಂದರೆ ವಕ್ಫ್ ಕಾನೂನನ್ನು ಕಸದ ಬುಟ್ಟಿಗೆ ಎಸೆಯುವುದಾಗಿ ಹೇಳಿಕೆ ನೀಡಿದ್ದ ತೇಜಸ್ವಿ ಮಾತುಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ವಿರೋಧಪಕ್ಷಗಳ ಮಹಾಘಟಬಂಧನ್‌ ಸೋಲಿನ ಭೀತಿ ಎದುರಿಸುತ್ತಿದ್ದು, ಸಮಾಜವನ್ನು ವಿಭಜಿಸಿ ಲಾಭ ಗಳಿಸುವ ಹುನ್ನಾರ ನಡೆಸಿವೆ’ ಎಂದು ಆರೋಪಿಸಿದೆ.

ತೇಜಸ್ವಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ‘ನಿರ್ದಿಷ್ಟ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಷರಿಯಾ ಕಾನೂನನ್ನು ಜಾರಿಗೆ ತರಲು ವಿರೋಧ ಪಕ್ಷಗಳು ಹುನ್ನಾರ ನಡೆಸಿವೆ. ಆದರೆ ಸಮಾಜದ ಎಲ್ಲಾ ವರ್ಗಗಳ ಏಳಿಗೆಗೆ ಎನ್‌ಡಿಎ ಕೆಲಸ ಮಾಡುತ್ತಿದೆ’ ಎಂದಿದ್ದಾರೆ.

ADVERTISEMENT

‘ಈ ‘ನಮಾಜವಾದಿ’ಗಳಿಗೆ ಬಾಬಾಸಾಹೇಬರ ಸಂವಿಧಾನ ಬೇಕಾಗಿಲ್ಲ. ಸಂವಿಧಾನವನ್ನು ಎಂದೂ ಇವರು ಗೌರವಿಸಿಲ್ಲ. ಅವರಿಗೆ ಬೇಕಿರುವ ಷರಿಯಾ ಕಾನೂನು ಹಾಗೂ ನಿರ್ದಿಷ್ಟ ಸಮುದಾಯದ ಏಳಿಗೆ ಮಾತ್ರ. ಷರಿಯಾ ಕಾನೂನು ಬಯಸುವ ಈ ನಮಾಜವಾದಿಗಳಿಗೆ ದೇಶದಲ್ಲಿ ಜಾಗವಿಲ್ಲ’ ಎಂದು ಆರೋಪಿಸಿದ್ದಾರೆ. 

‘ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡ ಕಾನೂನನ್ನೇ ಕಸದಬುಟ್ಟಿಗೆ ಎಸೆಯುವ ಮಾತುಗಳನ್ನಾಡುತ್ತಿರುವ ಇವರು ಬಾಬಾಸಾಹೇಬರ ಸಂವಿಧಾನವನ್ನು ಧಿಕ್ಕರಿಸಿದ್ದಾರೆ. ಇದನ್ನು ನೋಡುತ್ತಿರುವ ಬಿಹಾರದ ಜನರು ಬರಲಿರುವ ಚುನಾವಣೆಯಲ್ಲಿ ಇವರ ಕೋಮು ರಾಜಕೀಯವನ್ನೂ ಕಸದ ಬುಟ್ಟಿಗೆ ಎಸೆಯಲಿದ್ದಾರೆ’ ಎಂದಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ಪಾಟ್ನಾದ ಗಾಂಧಿ ಮೈದಾನದಲ್ಲಿ ರ‍್ಯಾಲಿ ನಡೆಸಿ, ‘ವಕ್ಫ್‌ ಉಳಿಸಿ, ಸಂವಿಧಾನ ಉಳಿಸಿ’ ಅಭಿಯಾನ ನಡೆಸಿದ್ದರು. ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ವಕ್ಫ್‌ ಕಾನೂನನ್ನು ಕಸದ ಬುಟ್ಟಿಗೆ ಎಸೆಯುವುದಾಗಿ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ‘ನಮಾಜವಾದಿ, ಮೌಲಾನಾ ಮತ್ತು ಮಸೀಹಾ ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ. ಸಂವಿಧಾನವನ್ನು ಎಂದಾದರೂ ನೀವು ಓದಿದ್ದೀರಾ? ನೀವು ಎಂದಾದರೂ ಸಂವಿಧಾನದ ಮೂಲ ಆಶಯವನ್ನು ಈಡೇರಿಸಿದ್ದೀರಾ? ಸಂಸತ್‌ ಅಂಗೀಕರಿಸಿ ಜಾರಿಗೆ ತಂದ ಕಾನೂನನ್ನು ಯಾವುದೇ ರಾಜ್ಯ ಸರ್ಕಾರ ಕಸದ ಬುಟ್ಟಿಗೆ ಹಾಕಲು ಸಾಧ್ಯವೇ?’ ಎಂದು ಕೇಳಿದ್ದಾರೆ.

‘ಮುಂದಿನ 50 ವರ್ಷಗಳ ಕಾಲ ನೀವು ಅಧಿಕಾರಕ್ಕೆ ಬರುವುದಿಲ್ಲ. ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.