ನವದೆಹಲಿ: ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಕುರಿತ ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿ, ಬಳಿಕ ಅಳಿಸಿ ಹಾಕಿದ್ದ ವಿಚಾರವಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಕ್ಷಮೆ ಯಾಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸುಮಿತ್ರಾ ಮಹಾಜನ್ ಜೀ ಅವರ ಮಗನ ಜತೆ ಮಾತನಾಡಿ ನಿನ್ನೆ ರಾತ್ರಿ (ಗುರುವಾರ) ಸುಳ್ಳು ಮಾಹಿತಿ ಟ್ವೀಟ್ ಮಾಡಿದ್ದಕ್ಕೆ ಸಂಬಂಧಿಸಿ ಕ್ಷಮೆ ಕೋರಿದೆ. ಅವರಿಗೆ ವಿಷಯ ಅರ್ಥವಾಯಿತಲ್ಲದೆ ನನ್ನ ಬಗ್ಗೆ ಕೃಪಾದೃಷ್ಟಿ ಹೊಂದಿದ್ದಾರೆ. ಸುಮಿತ್ರಾ ಮಹಾಜನ್ ಅವರು ಚೆನ್ನಾಗಿದ್ದಾರೆಂದು ತಿಳಿದು ಬಹಳ ಸಂತಸವಾಗಿದೆ. ಅವರಿಗೆ ಮತ್ತು ಅವರ ಕುಟುಂಬದವರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.
ಸುಮಿತ್ರಾ ಮಹಾಜನ್ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಶಶಿ ತರೂರ್ ಅವರು ಗುರುವಾರ ರಾತ್ರಿ ಟ್ವೀಟ್ ಮಾಡಿದ್ದರು. ಇದು ಗಮನಕ್ಕೆ ಬಂದ ಕೂಡಲೇ ಬಿಜೆಪಿ ನಾಯಕರು ಗಮನ ಸೆಳೆದಿದ್ದರು. ಮಹಾಜನ್ ಅವರು ಆರೋಗ್ಯದಿಂದ ಇದ್ದಾರೆ ಎಂದು ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಟ್ವೀಟ್ ಮಾಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ತರೂರ್ ಟ್ವೀಟ್ ಅಳಿಸಿ ಹಾಕಿದ್ದು, ಸ್ಪಷ್ಟನೆಯನ್ನೂ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.