
ಕೋಯಿಕ್ಕೋಡ್(ಕೇರಳ): ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪಕ್ಷದ ನಿಲುವನ್ನು ನಾನು ಉಲ್ಲಂಘಿಸಿಲ್ಲ ಎಂದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಕೆಲ ಸಿದ್ಧಾಂತಗಳ ವಿಚಾರವಾಗಿ ಮಾತ್ರ ತನ್ನ ಭಿನ್ನಾಭಿಪ್ರಾಯವಿದೆ ಎಂದಿದ್ದಾರೆ.
ಕೇರಳ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಕುರಿತಂತೆ ನಾನು ಬಲಿಷ್ಠ ನಿಲುವು ತೆಗೆದುಕೊಂಡಿದ್ದೇನೆ. ಕ್ಷಮೆಯಾಚಿಸುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಲೋಕಸಭೆಯಲ್ಲಿ ‘ಆಪರೇಷನ್ ಸಿಂಧೂರ’ ಕುರಿತ ವಿಶೇಷ ಚರ್ಚೆಯಲ್ಲಿ ಪಕ್ಷದ ಪರವಾಗಿ ಮಾತನಾಡಬೇಕೆಂಬ ಕಾಂಗ್ರೆಸ್ ಪಕ್ಷದ ಸೂಚನೆಯನ್ನು ಪಾಲಿಸಲು ತಿರುವನಂತಪುರ ಸಂಸದ ಶಶಿ ತರೂರ್ ನಿರಾಕರಿಸಿದ್ದರು. ಚರ್ಚೆಯ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಬೇಕು ಹಾಗೂ ಸದನದ ಕಾರ್ಯಕಲಾಪದಲ್ಲಿ ಪಕ್ಷದ ನಿಲುವನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ ಪಕ್ಷವು ತನ್ನ ಎಲ್ಲ ಸಂಸದರಿಗೆ ವಿಪ್ ಜಾರಿ ಮಾಡಿತ್ತು. ಆದರೆ, ಈ ವಿಷಯದಲ್ಲಿ ತರೂರ್ ನಿಲುವು ಪಕ್ಷದ ನಿಲುವಿಗಿಂತ ಭಿನ್ನವಾಗಿತ್ತು. ಪಹಲ್ಗಾಮ್ ಉಗ್ರರ ದಾಳಿ ಹಾಗೂ ಆ ಬಳಿಕದ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸ್ ಪಕ್ಷವು ಅನೇಕ ಪ್ರಶ್ನೆಗಳನ್ನು ಕೇಳಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತರೂರ್ ಸಾರ್ವಜನಿಕವಾಗಿ ಹೊಗಳಿದ್ದಾರೆ. ತರೂರ್ ಲಕ್ಷ್ಮಣರೇಖೆ ದಾಟಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಇದಕ್ಕೆ ಅವರು ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದರು.
ಕೊಚ್ಚಿ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ತಮ್ಮ ಉಪಸ್ಥಿತಿಯಿಂದ ಹಿಂದೆ ಸರಿದ ಹಿನ್ನೆಲೆ ಮತ್ತು ಪಕ್ಷದ ಸ್ಥಳೀಯ ನಾಯಕರು ತಮ್ಮನ್ನು ನಿರ್ಲಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ತರೂರ್ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.
ಪಹಲ್ಗಾಮ್ ದಾಳಿ ಬಳಿಕ ದಿನಪತ್ರಿಕೆಗೆ ಲೇಖನ ಬರೆದಿದ್ದ ತರೂರ್, ಭಾರತವು ಅಭಿವೃದ್ಧಿ ಬಗ್ಗೆ ಗಮನ ಹರಿಸಿರುವಾಗ, ಪಾಕಿಸ್ತಾನದ ಜೊತೆಗೆ ದೀರ್ಘ ಸಂಘರ್ಷಕ್ಕೆ ಇಳಿಯಬಾರದು. ಬದಲಿಗೆ, ಉಗ್ರರನ್ನು ಮಟ್ಟ ಹಾಕುವುದಕ್ಕೆ ಮಾತ್ರ ಕಾರ್ಯಾಚರಣೆ ಮಿತಿಯಾಗಿರಬೇಕು ಎಂದು ಬರೆದಿದ್ದರು. ಆಪರೇಷನ್ ಸಿಂಧೂರದ ಬಳಿಕ ನಾನು ಲೇಖನದಲ್ಲಿ ಏನು ಹೇಳಿದ್ದೆನೋ ಅದನ್ನೇ ಭಾರತ ಸರ್ಕಾರ ಮಾಡಿದೆ. ಇದು ನನಗೆ ಅಚ್ಚರಿಯಾಗಿದೆ ಎಂದು ಹೇಳಿದ್ದರು.
ವಿಶ್ವದಲ್ಲಿ ಭಾರತದ ಭದ್ರತೆ ಮತ್ತು ಸ್ಥಾನದ ವಿಷಯ ಬಂದಾಗ ಭಾರತವೇ ಮೊದಲು ಎಂದು ಹೇಳಿದ್ದಾರೆ.
ಉತ್ತಮ ಭಾರತವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ರಾಷ್ಟ್ರೀಯ ಹಿತಾಸಕ್ತಿ ವಿಷಯ ಬಂದಾಗ ಭಾರತವೇ ಮೊದಲು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.